ಗಿಲ್ಟು ಪುರಾಣ

ಲೈಫು ತುಂಬಾ ದೊಡ್ದು ಅಂತ ತಿಳ್ಕೊಂಡು ಬೇಕಾಬಿಟ್ಟಿ ಬದುಕ್ತಾ ಇರೋ ಸಿಕ್ಕಾಪಟೆ ಕಮ್ಮಿ ಜನ್ರಲ್ಲಿ ನಾನೂ ಒಬ್ಬ. ಒಂದ್ ಡಿಗ್ರೀನ ಮುಗಿಸೋ ಹೊತ್ತಿಗೆ ಭರ್ತಿ ಇಪ್ಪತ್ತೈದು ವರ್ಷ ಖಾಲಿಯಾಗಿತ್ತು, ಅಷ್ಟ್ರಲ್ಲಿ ನನ್ ಜೊತೆ ಕಲೀತಿದ್ದೋರೆಲ್ಲ ಮಾಸ್ಟರ್ ಡಿಗ್ರಿ ಮಾಡ್ಕೊಂಡು ಐದಾರು ಸೊನ್ನೆ ಹಿಂದೆ ಒಂದ್ ಅಂಕಿ ಸಂಬ್ಳ ಲೆಕ್ಕ ಮಾಡ್ತಿದ್ರು. ಹಿಂಗೆ ಆರಾಮಾಗಿ ಬದ್ಕಿ ಏನ್ ಕಡ್ದು ಕಟ್ಟೆ ಹಾಕಿದ್ನೋ ಇಲ್ವೋ, ಲೆಕ್ಕ ಮಾಡಿದ್ರೆ ಕೈಬೆರಳು ಸಾಕಾಗೋವಷ್ಟು ಗಿಲ್ಟ್ ಇದೆ, ಬಹುಶಃ ಈ ನನ್ನ ಹಳೆ ಕ್ಲಾಸ್‌ಮೇಟ್‌ಗಳದ್ದು ಅವರ ಸಂಬಳದಷ್ಟೇ ದೊಡ್ಡ ಲೆಕ್ಕವಾಗ್ಬೋದು. ಹಿಂಗಾಗಿ ನಾನು ಗ್ರೇಟು, ನೀವ್ ನಂಬ್‌ಬೇಕು.
ಹಿಂಗೇ ಹೊತ್ತೋಗ್ದಿದ್ದಾಗ ನನ್ ಗಿಲ್ಟ್‌ಗಳನ್ನ ನೆನ್ಪ್ ಮಾಡ್ಕೊಂಡು ಫ್ರೆಶ್ ಆಗ್ತೀನಿ. ಅಪ್ಪಿತಪ್ಪಿ ಕೂಡ ಲೆಕ್ಕಕ್ಕೆ ಸಾಕಾಗ್ದಿರೋ ವಿಫಲ ಪ್ರೇಮಗಳನ್ನ ಹೇಳಿ ಬೋರ್ ಹೊಡೆಸಲ್ಲ, ಇದು ನನ್ ಲವ್ಕತೆ ಅಲ್ವೇ ಅಲ್ಲ. ಈಗ ನಗ್ಬೋದು ನೀವು, ಖುಷಿ ಆಗಿರ್ಬೇಕಲ್ಲ?

ಗಿಲ್ಟ್ ನಂಬರ್ ಒಂದು,
ಲಿಮಿಟೇಶನ್ಸ್ ಅನ್ಲಿಮಿಟೆಡ್:
ಮೊದಲ್ನೇ ಸಲ ಡಿಗ್ರಿಗೆ ಸೇರ್ಕೊಂಡಾಗ ಅಷ್ಟೂ ಸಬ್ಜೆಕ್ಟ್ಸ್ ಕ್ಲಿಯರ್ ಇರೋ ಕ್ಯಾಟಗರೀಲಿ ಒಂದ್ವರ್ಷ ಬದ್ಕಿ ಬೇಜಾರ್ ಬಂತು. ಹಿಂಗೆ ಲೆಕ್ಕ ಮಾಡಿದ್ರೆ ಲೆಕ್ಕಾಚಾರ ನೆಟ್ಗಿರತ್ತೆ ಅಂತ ಹೇಳ್ಕೊಡೋ ಬಿ.ಕಾಂ. ಪ್ರತಿ ಕ್ಲಾಸೂ ಒಂದೇ ಥರ ಇರ್ತಿತ್ತು, ಸಿ ಕ್ಲಾಸ್ ಗಂಡ್ಮಕ್ಳ ಬೇಕಾಬಿಟ್ಟಿ ಲೈಫು ಆಕರ್ಷಣೆಯಾಗಿತ್ತು. ಆಕರ್ಷಣೆ ಗುಟಖಾ ತಿನ್ನೋದ್ರಿಂದ ಶುರುವಾಗಿ ಗಾಂಜಾ ತನ್ಕ ಹೋಯ್ತು. ಚಟಗಳಿಗೆ ಅಪ್ಪ ಕೊಡೋ ಪಾಕೆಟ್ ಮನಿ ಸಾಕಾಗಲ್ಲ ಅಂತ ಪಾರ್ಟ್ ಟೈಮ್ ಜಾಬಿಗೆ ಸೇರ್ಕೊಂಡೆ, ಚಟ ಮತ್ತೂ ಹೆಚ್ಚಾಯ್ತು. ಕೊನೆಗೆ ಎಕ್ಸಾಂ ಫೀ ದುಡ್ಡಲ್ಲೂ ಚಟ ಮಾಡ್ದೆ. ಹುಡ್ಗಿಗೂ ಬೇಜಾರ್ ಬಂದು ಬಿಟ್ಟೋದ್ಳು. ಬಂದ ಸಿಟ್ಟಿಗೆ ಅಷ್ಟೂ ಚಟ ಬಿಟ್ಟೆ. ಆದ್ರೆ ಇತಿಹಾಸ ಬಿಡ್ಲಿಲ್ಲ. ಯಾರದ್ದೋ ಗಲಾಟೆ ಮಧ್ಯ ನಾನು ಸಿಕ್ಕಾಕ್ಕೊಂಡೆ, ಅದೇ ಹೊತ್ತಿಗೆ ಎಕ್ಸಾಂ ಫಾರ್ಮ್ ತುಂಬಿಲ್ಲ, ಗಲಾಟೆ ಮಾಡ್ದಾ ಅಂತ ಕಾಲೇಜವ್ರು ಟಾಟಾ ಮಾಡಿದ್ರು. ಮಾಡಿದ್ ತಪ್ಪಿಗೆ ಅಪ್ಪ ಬೈದ್ರು, ಮುಚ್ಕೊಂಡ್ ಮನೆಗ್ ಬಂದೆ. ಇದೊಂದು ಗಿಲ್ಟ್ ಇದೆ. ಆದ್ರೆ ನನ್ನ ಆ ಪ್ರಾಯದ ಎಲ್ಲಾ ಮಕ್ಳಲ್ಲೂ ಇಂಥದೊಂದು ಹೊರಜಗತ್ತಿನ ಅನವಶ್ಯಕ ಆಕರ್ಷಣೆಗಳು ಕಾಡೋದುಂಟು. ಕೆಲವರ ಬದುಕು ಆವತ್ತೇ ಹಾಳಾಗತ್ತೆ, ನನ್ ಥರದ ಬದುಕು ಬದಲಾಗತ್ತೆ.
ಮಾಡೋಕಾಗದ ಸಿಎಸ್ಸನ್ನ ಬಿಟ್ಟು ವಾಪಸ್ ಮನೆ ಸೇರೋ ಹೊತ್ತಿಗೆ ಇದ್ದ ಬರೆಯೋ ಚಟದ ದೆಸೆಯಿಂದ ಜರ್ನಲಿಸಂ ಮುಗಿಸಿದೆ. ಎರಡೂಮುಕ್ಕಾಲು ವರ್ಷವಾಯ್ತು, ಮೊದಲು ಸೇರಿದ್ದ ಪತ್ರಿಕೆಯಲ್ಲೇ ಇವತ್ತಿಗೂ ಕೆಲಸ ಮಾಡ್ತಿದೀನಿ. ಅವ್ನಿಗೆ ನೆಟ್ಗೆ ಐದ್ ಸಾವ್ರ ಕೂಡ ಸಂಬಳ ಬರಲ್ಲ ಅಂತ ಊರ್ ಕಡೆ ಮಾತಾಡ್ಕೊಳ್ತಾರಂತೆ, ಅಮ್ಮ ಹೇಳ್ತಿದ್ಳು. ನನ್ನ ಲೈಫ್‌ಸ್ಟೈಲನ್ನ ಒಂದ್ ತಿಂಗ್ಳು ಫಾಲೋ ಮಾಡಿದ್ರೆ ಬೆಂಗ್ಳೂರಲ್ಲಿ ಕೆಲಸ ಮಾಡ್ತಿರೋ ಇವರ ಮಕ್ಳೆಲ್ಲ ಮನೆಗೆ ಬರ್ಬೇಕಾಗತ್ತೆ. ಸಂಬಳ ಅವ್ರಿಗಿಂತ ಕಮ್ಮಿ ಇರ್ಬೋದು, ಆದ್ರೆ ಬದ್ಕೋಕೆ ಅಸಾಧ್ಯ ಅನ್ನೋ ರೇಂಜಿಗಿಲ್ಲ. ಇವ್ರಿಗೆಲ್ಲ ಉತ್ತರ ಕೊಡೋ ದರ್ದು ಬಂದಿದ್ರೆ ನಾಲ್ಕು ವರ್ಷದ ಹಿಂದೇ ಎರಡು ಮೂವಿಗಳಿಗೆ ಸ್ಲ್ರಿಪ್ಟ್ ಬರ್ದಿರ್ತಿದ್ದೆ. ಹ್ಞೂಂ, ಈಗ ಹೇಳ್ತೀನಿ ಕೇಳಿ; ಎರಡನೇ ಗಿಲ್ಟ್.

ಗಿಲ್ಟ್ ನಂಬರ್ ೨,
ಮೂಡ್ ಇಲ್ದೆ ನಿದ್ರೇನೂ ಮಾಡಲ್ಲ:
ಯಾಕಿಂಗೆ ಗೊತ್ತಿಲ್ಲ. ನಿದ್ರೆ ಮಾಡೋದು ನನ್ನ ಅಗ್ದಿ ಫೇವ್ರೀಟ್ ಹವ್ಯಾಸ. ರೆಕಾರ್ಡ್ ಪ್ರಕಾರ ಮೂವತ್ತೆಂಟು ತಾಸು ಸತತ ನಿದ್ರೆ ಮಾಡಿದ್ದೆ. ಆದ್ರೆ ಮೂಡ್ ಇಲ್ಲ ಅಂದ್ರೆ ನಿದ್ರೇನೂ ಮಾಡದಿರೋವಷ್ಟು ಮೂಡಿ.
ಪೊಟ್ಯಾಷಿಯಂ ಪರಮಾಂಗನೇಟ್ ಅಂತ ಒಂದು ಫೇಸ್ಬುಕ್ ಐಡಿ ಇತ್ತು ನಂದು. ಅರ್ಧಮರ್ಧ ಕನ್ನಡ ಕಲ್ತು ಏನೇನೋ ಗೀಚ್ತಿದ್ದ ಕಾಲ ಅದು. ಸಣ್ಸಣ್ಣ ಕತೆಗಳನ್ನ ಬರ್ದು ಫೇಸ್ಬುಕ್ಕಲ್ಲಿ ಹಾಕ್ತಿದ್ದೆ. ನನ್ನ ಆತ್ಮಕ್ಕೆ ಯಾವ ನಾಗರಿಕತೆಯ ಸೋಂಕೂ ತಾಗದಿದ್ದ ಕಾಲ ಆಗಿತ್ತದು. ನನ್ನ ಗೊಂದಲ, ನನ್ನ ಅತೃಪ್ತಿ, ನನ್ನ ಅಸಹಾಯಕತೆ, ನನ್ನ ಸ್ವಾರ್ಥ, ನನ್ನ ಸೋಲು ಎಲ್ಲವೂ ಪಾತ್ರಗಳಾಗಿ, ಕತೆಗಳಾಗಿ ಹೊರಬಿದ್ವು. ನಾಗರಿಕರ ಮಧ್ಯೆ ಅನಾಗರಿಕ ಬರಹಗಳು ಹೊಸ ತೆರನಾಗಿ ಕಂಡ್ವು. ಕತೆಗಳು ನನ್ನನ್ನು ಶುದ್ಧಗೊಳಿಸಿದ್ವು, ಮತ್ಯಾರನ್ನೋ ಚುಚ್ಚಿದವು. ನಾನಾಗೇ ಕಳಿಸಿದ್ದ ಫ್ರೆಂಡ್ ರಿಕ್ವೆಸ್ಟ್‌ಗಳು ಮೂರು. ನಾಲ್ಕೂ ಮುಕ್ಕಾಲು ಸಾವಿರ ಫ್ರೆಂಡ್‌ಗಳ ಮಧ್ಯ ಒಂದಿಷ್ಟು ಚಲನಚಿತ್ರದ ಮಂದಿಯೂ ಸೇರಿಕೊಂಡಿದ್ರು. ನಂಗೂ ಆಗ ಸೆಲೆಬ್ರಿಟಿ ಫೀಲಿಂಗು ಹೊಕ್ಕಿಕೊಂಡ್ತು. ಅಲ್ಲಿಗೆ ನನ್ನ ಶುದ್ಧ ಬರಹಕ್ಕೆ ಅಹಂಕಾರ ಬಂತು. ನನ್ನ ಹೆಸರು ಗೊತ್ತಿಲ್ದೇ ಬರೀ ಫೊಟೋ ನೋಡಿ ಗುರುತಿದ್ದವರಿಗೆ ಹೆಸರು ತಿಳೀತು. ನನ್ನ ಬರಹದ ಶಕ್ತಿಯ ಬದಲು ಹೆಸರ ಅಹಂಕಾರ ಬಂತು. ಆತ್ಮೀಯ ಸ್ನೇಹಿತರ ಬದ್ಲು ಸಾರ್ ಅನ್ನೋ ಫ್ಯಾನುಗಳು ಬಂದ್ರು. ಅವರ ನಿರೀಕ್ಷೆಗಳು ನನ್ನ ಬರಹವನ್ನ ಆವರಿಸಿದ್ವು. ಮೂರು-ನಾಲ್ಕು ವರ್ಷಗಳಲ್ಲಿ ಅಕೌಂಟ್ ಡಿಲೀಟ್ ಮಾಡುವಷ್ಟು ನನ್ನ ಬಗೆಗಿನ ದ್ವೇಷ ನನ್ನಲ್ಲಿ ಮೂಡಿತ್ತು. ಇದು ಯಾವತ್ತಿಗೂ ಕಾಡೋ ಗಿಲ್ಟ್‌ಗಳಲ್ಲಿ ಒಂದು.
ಆಗಿನ್ನೂ ನಾನು ಎರಡನೇ ಡಿಗ್ರೀಯ ಮೊದಲ ವರ್ಷದ ವಿದ್ಯಾರ್ಥಿ. ಹಿಂಗೇ ಒಬ್ಬ ಮಹಿಳೆಯ ಮೆಸೇಜು ಪಾಪ್ ಅಪ್ ಆಯ್ತು, ರಾತ್ರಿ ಹತ್ತೂಮುಕ್ಕಾಲಿನ ಹೊತ್ತಿಗೆ. ಸರ್, ಚೆನ್ನಾಗಿ ಬರೀತೀರಿ. ನಾವೊಂದು ಮೂವಿ ಮಾಡ್ತಿದೀವಿ, ಸ್ಕ್ರಿಪ್ಟ್ ಬರೀತೀರಾ ಅಂತ ಮೆಸೇಜು ಓದಿಕೊಳ್ತಿತ್ತು. ನಾ ಎಂತ ರಿಪ್ಲೈ ಮಾಡ್ಲಿ? ತೋಚಿದ್ದನ್ನ ಗೀಚೋದು ಬಿಟ್ಟು ಹೇಳಿದ್ದನ್ನ ಬರೆಯುವಷ್ಟು ಸತ್ವ ನನ್ನಲ್ಲಿ ಇರ್ಲಿಲ್ಲ. ಪತ್ರಕರ್ತ ಆಗ್ಬೇಕು ಅಂತ್ಲೇ ಜರ್ನಲಿಸಮ್ ಡಿಗ್ರೀಯನ್ನ ಆಯ್ದುಕೊಂಡಿದ್ದು. ಆಗ್ಲೇ ಒಂದು ಡಿಗ್ರೀ ಹಳ್ಳ ಹಿಡ್ಸಿ ಅಪ್ಪನ ದುಡ್ಡನ್ನೂ ಖಾಲಿ ಮಾಡಿಯಾಗಿತ್ತು. ಪಿಚ್ಚರ್ ಅಂತ ಹೋಗಿ ಸುದೀರ್ಘ ಬದುಕನ್ನ ಮತ್ತಷ್ಟು ಬೆಳೆಸೋವಷ್ಟು ಧೈರ್ಯ ಇರ್ಲಿಲ್ಲ. ಆ ಮೇಡಮ್ಮಿಗೆ ಹಿಂಗೇ ಅಂದೆ. ಆಮೇಲೆ ಅವರು ಚಿತ್ರ ಮಾಡಿ ಬಿಡುಗಡೆಯನ್ನೂ ಮಾಡಿದ್ರು. ಒಳ್ಳೆ ಕಾನ್ಸೆಪ್ಟಿನ ಚಿತ್ರವಾಗಿತ್ತು. ಆದ್ರೆ ನಮ್ಮೂರಿಗೆ ಮಾತ್ರ ಬರ್ಲಿಲ್ಲ. ಅವಕಾಶಗಳು ಬರ್ತಿರತ್ವೆ. ಬಂದ ಅವಕಾಶಗಳನ್ನ ಅರ್ಹತೆಯಿಲ್ಲದಿದ್ರೂ ಒಪ್ಕೊಂಡು ನಾಲ್ಕೈದು ಬದುಕನ್ನ ಹಾಳು ಮಾಡೋರು ಬಹಳಷ್ಟು ಮಂದಿ ಇದ್ದಾರೆ. ಅವರಲ್ಲಿ ನಾನೊಬ್ಬನಾಗ್ಲಿಲ್ಲ ಅನ್ನೋ ಗರ್ವ ಇವತ್ತಿಗೂ ಇದೆ, ಇದು ಗಿಲ್ಟ್ ಆಗಿ ಉಳಿದಿಲ್ಲ.
ಆದ್ರೆ ಸಿನಿಮಾದೋರ ಸಹವಾಸ ಮಾತ್ರ ನಂಗೆ ತಪ್ಪಿಲ್ಲ. ಮೊನ್ನೆ ಮೊನ್ನೆ ಒಂದು ಗಿಲ್ಟ್ ಹುಟ್ಟಿಕೊಂಡ್ತು. ಹೇಳ್ತೀನಿ ಕೇಳಿ.

ಗಿಲ್ಟ್ ನಂಬರ್ ೪,
ಲೈಫು ಧಾರಾವಾಹಿ:
ನಾನೂ ಒಂದಿಷ್ಟು ಲವ್‌ಗಳನ್ನ ಮಾಡಿದ್ದೆ, ಯಾವ್ದೂ ಲವ್ ಥರ ಫೀಲ್ ಆಗ್ಲಿಲ್ಲ. ಅದೆಂಗೆ ಜನ ಹಿಂಗೆ? ನೋಡಿದ್ರಂತೆ, ಇಷ್ಟವಾದ್ರಂತೆ, ಮದುವೆಯಾದ್ರಂತೆ, ಈಗ ಜಗಳವಂತೆ... ಮೊನ್ಮೊನ್ನೆ ಹಿಂಗೇ ಒಬ್ರು ಹೆಣ್ಮಗ್ಳು ಮೆಸೇಜ್ ಹಾಕಿದ್ರು. ಮದುವೆಯಾದ ಗಂಡ ಬೇರೆಯವ್ರ ಜೊತೆ ಫ್ಲರ್ಟ್ ಮಾಡ್ತಿದಾನೆ ಅಂತ. ಅವ ಹೇಳಿಕೇಳಿ ನಟ, ತೀರಾ ಅಪರಿಚಿತ ಏನಲ್ಲ. ಆ ಮನ್ಷ ನಂಗೆ ಏನೂ ಮಾಡದಿದ್ರೂ ಮೊದಲಿಂದ್ಲೂ ಅದೆಂಥದೋ ಕೆಟ್ಟ ಅಭಿಪ್ರಾಯ ಅವನಮೇಲಿತ್ತು. ಹಿಂಗೆ ಒಬ್ಳು ಮೆಸೇಜ್ ಮಾಡಿದಾಗ ಮಾನವೀಯತೆ ಇರೋ ಮನ್ಷ್ರು ಹೆಂಗೆ ರಿಯಾಕ್ಟ್ ಮಾಡ್ಬೇಕು? ಸಮಾಧಾನ ಮಾಡಿ ಸರಿಯಾಗಿ ಯೋಚ್ನೆ ಮಾಡಮ್ಮ ಅಂತ ಹೇಳ್ಬೇಕು ತಾನೆ? ಮೊದಲ ದಿನ ಎಲ್ಲಾ ಮಾನವೀಯ ಜನರಂತೇ ಬೇಕಾದಷ್ಟು ಮಾತಾಡಿ ಇಗ್ನೋರ್ ಮಾಡಿದ್ದೆ. ಮಾರ್ನೇ ದಿನ ರೆಕಾರ್ಡುಗಳು ಬಂದ್ವು. ನಾನೂ ಮೊದಲಿನಂತೇ ಇದ್ದಿದ್ರೆ ಇಬ್ಬರನ್ನೂ ಮಾತನಾಡಿಸಿ ಸರಿಮಾಡಬಹುದಿತ್ತೇನೋ. ಆದ್ರೆ ನಾನೀಗ ಪತ್ರಕರ್ತ! ಸೀರಿಯಲ್ ಹುಡ್ಗ ಅಂತ ಚಾನಲ್ಲವ್ರಿಗೆ ಕೊಟ್ಟೆ. ಒಂದ್ವಾರ ಕಿತ್ತಾಡ್ಕೊಂಡ್ರು, ಜನ್ರಿಗೆ ಬಿಟ್ಟಿ ಎಂಟರ್ಟೇನ್ಮೆಂಟು. ಪ್ರೀತಿ ಯಾರ್ ಮಾಡಲ್ಲ? ಪ್ರಾಯದಲ್ಲಿ ಆಗೋ ಕೆಲ ಪಕ್ಕಾ ತಪ್ಪುಗಳ ಪೈಕಿ ಇದೂ ಒಂದು. ಬದುಕು ಇಷ್ಟಗಳನ್ನ ಕಟ್ಕೊಂಡು ಉಳ್ಯಲ್ಲ. ಅದ್ಕೆ ಕಮಿಟ್ಮೆಂಟ್ ಬೇಕು. ಪ್ರತಿಯೊಬ್ಬರ ಬದುಕು, ಬದುಕಿನ ಶೈಲಿ, ಬದುಕಿನ ನಿರೀಕ್ಷೆ ಎಲ್ಲವೂ ಬೇರೆಯಿರ್ತಾವೆ. ಅದನ್ನ ಗೌರವಿಸಿ, ಆಯ್ಕೆ ಬಿಟ್ಟು, ಅವಕಾಶ ಕೊಟ್ಟು ಬದುಕಿದ್ರೆ ಲೈಫು ಆರಾಮು. ನಾನು ಮೊಟ್ಟೆ ಕೂಡ ತಿನ್ನದಿರೋ ಮನ್ಷ. ದಿನಾ ಚಿಕನ್ ಇಲ್ದೇ ಊಟ ಮಾಡ್ದಿರೋ ಹುಡ್ಗಿ ಜೊತೆ ಲವ್ ಆಗತ್ತೆ. ಆದ್ರೆ ಬದುಕೋಕೆ ಕನಿಷ್ಟ ಆಹಾರ ಶೈಲಿಯ ವ್ಯತ್ಯಾಸವನ್ನ ಅರ್ಥಮಾಡ್ಕೊಳೋದು ಕಷ್ಟವಾಗುತ್ತಾ? ಅನುಭವ ಇಲ್ಲ, ಗೊತ್ತಿಲ್ಲ. ಆದ್ರೆ, ಎಂಥಾ ರಿಲೇಶನ್ಶಿಪ್‌ಗಳಾದ್ರೂ ಅಷ್ಟೇ, ಸಂಗಾತಿಯ ಇಷ್ಟಗಳನ್ನ ಅರ್ಥ ಮಾಡ್ಕೊಳ್ದಿದ್ರೆ ಬೇಜಾರು ಬಂದ್ಬಿಡತ್ತೆ. ಕೊನೆಗೆ ಚಿಕ್ಕ ಚಿಕ್ಕ ವಿಷಯಗಳೂ ಜಗಳಗಳಿಗೆ ಕಾರಣವಾಗತ್ತೆ. ಮೊದಲೇ ಯೋಚಿಸದಿದ್ರೆ ಎರಡೂ ಜೀವನ ಹಾಳಲ್ವಾ? ಖುಷಿಯಿಲ್ಲದ ಜೀವನ ಇಟ್ಕೊಂಡು ಏನ್ ಮಾಡ್ತಾರೋ ಮಂದಿ, ಗೊತ್ತಿಲ್ಲ. ಆದ್ರೆ ಅವ್ರಿಬ್ರ ಕಿತ್ತಾಟಕ್ಕೆ, ದ್ವೇಷಕ್ಕೆ, ಕೆರಿಯರ್ ಹಾಳುಮಾಡೋ ಚಟಕ್ಕೆ ನಾನೂ ಕಾರಣನಾದೆ ಅನ್ನೋ ಗಿಲ್ಟ್ ಇದ್ಬಿಡ್ತು.
ಹಾಗೆ ಹೇಳೋಕೋದ್ರೆ ಇವತ್ತೂ ನನ್ನ ಮದುವೆಯಾಗೋಕೆ ಒಬ್ಳು ತಯಾರಿದಾಳೆ. ಚೆಂದ ಇದಾಳೆ, ಒಳ್ಳೆಯವ್ಳು. ಆದ್ರೆ ಚಿಕನ್ ತಿನ್ತಾಳೆ. ಮದುವೆಯಾಗ್ಲಾ? ಹ್ಞೂಂ ಅನ್ನೋರೆಲ್ಲ ಮುಂದೊಂದ್ ದಿನ ನನ್ನನ್ನೂ ಟಿವಿಯಲ್ಲಿ ನೋಡಿ ಮಜಾ ತಗೊಳ್ಳೋ ಸ್ಕೆಚ್ ಹಾಕಿದೋರೇ ಬಿಡಿ. ಗ್ಯಾಪಲ್ಲಿ ಮೂರ್ನೇ ಗಿಲ್ಟ್ ಬಿಟ್ಟು ನಾಲ್ಕನೇ ಗಿಲ್ಟ್ ಹೇಳಿದ್ದನ್ನ ನೀವು ಗಮನಿಸಿದ್ರಾ? ಈಗ ಮೇಲೆ ಸ್ಕ್ರಾಲ್ ಮಾಡ್ಬೇಡಿ, ಮೂರ್ನೇದು ಕೆಳ್ಗಿದೆ.

ಗಿಲ್ಟ್ ನಂಬರ್ ೩,
ಅಲ್ಪತೃಪ್ತನಿರ್ಬೋದಾ ನಾನು?
ಆಗ್ಲೇ‌ ಹೇಳ್ದೆ, ಎರಡೂಮುಕ್ಕಾಲು ವರ್ಷದಿಂದ ಒಂದೇ ಕಡೆ ಕೆಲಸ ಮಾಡ್ತಿದೀನಿ ಅಂತ. ಬೇರೆ ಕಡೆ, ಬೇರೆ ಫೀಲ್ಡ್‌ಗಳಲ್ಲಿ ಅವಕಾಶ ಇದ್ರೂ ಹೋಗ್ಲಿಲ್ಲ. ಈಗ ಕೆಲಸ ಮಾಡ್ತಿರೋದ್ರಲ್ಲಿ ನಂಗೆ ಖುಷಿಯಿದೆ ಅಂತ. ಆದ್ರೆ ಸಮಾಜದ ನಿರೀಕ್ಷೆಗಳಂತೆ ನಾನು ಬೇರೆ ಕಡೆ ಜಂಪ್ ಆಗದಿದ್ರೆ ನಾನು ಅಸಮರ್ಥ. ಸ್ಯಾಲರಿ ದೊಡ್ಡ ಮೊತ್ತದಲ್ಲಿರ್ಬೇಕು, ಲಕ್ಷುರಿ ಮನೆ ಇರ್ಬೇಕು, ಹೈ ಎಂಡ್ ಕಾರಿರ್ಬೇಕು ಅನ್ನೋ ಆಸೆಗಳು ನಂಗೆ ಯಾಕಿಲ್ಲ? ವಾರಗಟ್ಲೆ ಚಪ್ಪಲಿ ಹಾಕದೇ ನಡೆಯೋವಷ್ಟು, ಮೊಬೈಲ್ ಸ್ಕ್ರೀನು ಒಡೆದ್ರೂ ಅದನ್ನೇ ಬಳಸೋವಷ್ಟು, ಗಡ್ಡ ಸರಿಯಾಗಿ ಬರ್ದಿದ್ರೂ ಕೆತ್ತದೇ ಬಿಡುವಷ್ಟು ನಿರ್ಲಕ್ಷ್ಯ ಜೀವನ ಶೈಲಿಯಾ ನನ್ದು? ನಾನು ಅಲ್ಪ ತೃಪ್ತನಾ ಅನಿಸುವಷ್ಟು ನಾನಿನ್ನೂ ನಂಗೆ ಅರ್ಥವಾಗಿಲ್ಲ. ನಾನ್ಯಾಕೆ ಹಿಂಗೆ ಅನ್ನೋದೇ ಇದುವರೆಗಿನ ದೊಡ್ಡ ಗಿಲ್ಟು.
ಒಂದು ಪ್ರಾಯ ದಾಟೋ ಹೊತ್ತಿಗೆ ಪ್ರೇಮ ಅನ್ನೋದು ಸಾಮಾಜಿಕ ಭ್ರಮೆ ಅನ್ನೋದರ ಅರಿವಾಯ್ತು. ರಿಲೇಶನ್ಶಿಪ್‌ಗಳು ನಮ್ಮ ಖುಷಿಗೆ ಶುರುವಾಗಿ ಕೊನೆಕೊನೆಗೆ ಸಂಗಾತಿಯ ಖುಷಿಗೆ ಅಂತ ಇಬ್ರೂ ಮುಖವಾಡ ತೊಟ್ಕೊಂಡು ಬದುಕ್ತಾರೆ. ಯಾರದ್ದೋ ಲೈಫನ್ನ ಬದುಕುವಷ್ಟು ಜೀತದ ಪ್ರೇಮ ಬೇಡ ಅಂತನಿಸತ್ತೆ. ಜಗಳವಾಡಿ ಎದುರು ಸಿಕ್ಕಾಗ ಅಪರಿಚಿತರಂತೆ ತಿರುಗಾಡುವಷ್ಟು ಜೀವನ ಸೀರಿಯಸ್ಸಾಗಿ ಇಲ್ಲ. ಹಿಂಗೇ ಅನಿಸಿ ಬ್ರೇಕಪ್ಪುಗಳಾಗ್ತಿದ್ವು. ಕೊನೇ ಬ್ರೇಕಪ್ಪು ಘಟಿಸಿ ಎರಡು ವರ್ಷವಾದ್ವೇನೋ, ಪಕ್ಕಾ ನೆನಪಿಲ್ಲ. ಕೆಲ ಆಂಟಿಯರು ಮೆಸೇಜು ಮಾಡ್ತಾರೆ, ಮದುವೆಯಾಗಿ ಮಕ್ಕಳಾದ್ರೂ ಒಂಥರಾ ದಾಟಿಯಲ್ಲಿ. ಅವರನ್ನ ಅತೃಪ್ತರು ಅಂತ ಕರೆಯೋದಾ? ಕ್ಲಾರಿಟಿ ಇಲ್ಲ. ಅಂಥವರನ್ನ ಸಾಧ್ಯವಾದಷ್ಟು ದೂರ ಇಟ್ಟಿರೋದು ನನ್ನ ಈ ಅಲ್ಪತೃಪ್ತಿಯ ಲೆಕ್ಕದಲ್ಲಿ ಇಟ್ಟಿಲ್ಲ. ನಿಜವಾಗಿ ಗಿಲ್ಟ್ ಕಾಡೋದು ಯಾವಾಗ ಗೊತ್ತಾ? ಅವರ ಸಾದಾ ಮಾತಿಗೆಲ್ಲ ಚೆನ್ನಾಗಿ ಪ್ರತಿಕ್ರಿಯೆ ಕೊಟ್ಟು ಅವರ ದ್ವಂದ್ವಾರ್ಥ ಸಂಭಾಷಣೆ ಹೊತ್ತಿಗೆ ನಾನು ಮೊದಲೇ ಮಾತನಾಡ್ದಿದ್ರೆ ಹೀಗೆ ಆಗ್ತಿರ್ಲಿಲ್ಲ, ನನ್ನಿಂದ ಅವರ ಸಂಸಾರ ಹಾಳಾದ್ರೆ? ಅನ್ನೋ ಯೋಚನೆ ಶುರುವಾದಾಗ. ಸದ್ಯಕ್ಕೆ ಇಷ್ಟು ಸೀರಿಯಸ್ ಗಿಲ್ಟುಗಳಿಗೆ ಸಿಲುಕದಷ್ಟು ಅನಾಗರಿಕ ಮಾತುಕತೆಗಳಲ್ಲಿ ಬದುಕಿದ್ದೇನೆ ಅನ್ನೋದೇ ಸಮಾಧಾನ.

ನಾಲ್ಕೇ ಗಿಲ್ಟುಗಳಾ ನಂದು ಅಂತ ಯೋಚ್ನೆ ಮಾಡಿದೆ. ಮತ್ತೊಂದೆರಡು ನೆನಪಾದರೂ ಹೇಳಿಕೊಳ್ಳುವಷ್ಟು ಗಂಭೀರವಲ್ಲ. ಒಂದೆರಡು ಸುಳ್ಳು ಹೇಳಿದ್ದು, ಅನವಶ್ಯಕ ಸತ್ಯ ಹೇಳಿದ್ದು ಗಿಲ್ಟ್‌ಗಳ ಪಟ್ಟಿಯಲ್ಲಿ ಇವೆ. ಸಾಯೋ ಹಿಂದಿನದಿನ ಕಾಡೋವಷ್ಟು ಗಂಭೀರ ಗಿಲ್ಟ್‌ಗಳು ನನ್ನ ಬದುಕಿನ ಜೊತೆ ಸೇರದಿರ್ಲಿ ಅನ್ನೋ ಆಸೆಯಿದೆ. ಆದ್ರೆ ಲೈಫು ಗುರೂ ಇದು, ನಾಳೆ ಏನಾಗತ್ತೋ ಯಾರಿಗೆ ಗೊತ್ತು! ಇವತ್ತು ನಿದ್ರೆ ಮಾಡಿದ್ರೆ ಒಳ್ಳೆ ಕನಸು ಬೀಳ್ವಷ್ಟು ಖುಷಿ ಇದ್ಯಾ? ಅಷ್ಟು ಸಾಕು. ಕಾಡೋ ಗಿಲ್ಟುಗಳನ್ನ ಹೀಗೆ ಬರ್ದು ಪಬ್ಲಿಶ್ ಮಾಡ್ಬಿಡಿ, ನಿಮ್ಗೂ ಖುಷಿ ಸಿಗ್ಬೋದು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ