ನಾಯಿಮಳ್ಳ

ಮೊದಲು ನಾಯಿ ಮಳ್ಳ ಬಂದ. ಹೆಗಲಿಗೊಂದು ಜೋಳಿಗೆ, ಅದರಲ್ಲೊಂದು ನಾಯಿಮರಿ. ನರಪೇತಲ ನಾಯಿಯೊಂದು ಅವನ ಹಿಂದೆ. ಅದರ ಸಂಗಾತಿ ಮತ್ತೊಂದು ನಾಯಿ; ಕತ್ತಿಗೆ ಕಟ್ಟಿಸಿಕೊಂಡಿದ್ದ ಒಂದಂಗುಲ ದಪ್ಪದ ಸರಪಳಿಯ ಮತ್ತೊಂದು ತುದಿ ನಾಯಿಮಳ್ಳನ ಕೈಯಲ್ಲಿತ್ತು. "ಒಂದ್ ಕೆಂಪೀ ಹೆಣ್ ಕುನ್ನಿ ಒಂದ್ ಹೆಂಗ್ಸಿನ ಸಂತಿಗೆ ಬಂದಿತ್ತು. ಹೊಳೆ ಬುಡ್ಕೆ ಕಂಡಿತ್ತು. ಅದ್ಯಾರ್ ನಾಯೀನ್ರಾ?" ಅಂತ ಕೇಳಿದಾಗ ಅದು ಮಡಿವಾಳರ ಕೇರಿ ಚಂದ್ರನದ್ದೆಂದೂ, ಅವನ ಹೆಂಡತಿ ತಾರಾಳೊಟ್ಟಿಗೆ ಗದ್ದೆ ಕಡೆ ಬಂದಿತ್ತೆಂದೂ ಹೇಳಿದೆ. "ಚಂದ್ರನ ಮನೆ ಎಲ್ಲಿ?" ಎಂದು ಕೇಳಿದ್ದ. ಹಿಂಗೇ ಬೆಟ್ಟದ ಕೆಳಗೆ ಹಾವು ಹರಿದಂತೆ ಹೋಗಿರೋ ಕಾಲುಹಾದಿಯಲ್ಲಿ ನೆಟ್ಟಗೆ ಹೋದಾಗ ಸಿಗೋ ಮೂರನೇ ಮನೆಯೆಂದು ಹೇಳಿ ನನ್ನ ಬೈಕನ್ನು ತೊಳೆಯೋ ಕೆಲಸ ಮುಂದುವರಿಸಿದ್ದೆ.
     ಮಾರನೇ ದಿನ ವಾಪಸ್ಸು ಕೆಲಸಕ್ಕೆ ಹಾಜರಿರಬೇಕಿತ್ತು. ಸಂಜೆ ಮನೆಗೆ ಬರೋವರೆಗೆ ದನಗಳಿಗೆ ತಿನ್ನಲು ಬೇಕಲ್ಲ, ಹೊಳೆಬದಿಯ ಹಾಳು ಗದ್ದೆಗೆ ಹೋಗಿ ಹಸಿ ಹುಲ್ಲು ಸವರುತ್ತಿದ್ದೆ. ಹುಲ್ಲು ಸವರುತ್ತಿದ್ದವನಿಗೆ ಈ ನಾಯಿ ಮಳ್ಳನದ್ದೇ ಯೋಚನೆ. ಭಯಂಕರ ಲವಲವಿಕೆಯ ಮನುಷ್ಯ. ಅದ್ಯಾಕೆ ಈ ಮಳ್ಳ ಮಳ್ಳನಾದನೋ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಜರೂರತ್ತು ಇದೆ ಅನ್ನಿಸಿತು. ನಾನೂ ಶರತ್‌ಚಂದ್ರರ ದೇವದಾಸ್ ಓದಿದ್ದೆ. ಪಾರೋ ಸಿಗದೇ ನಾಯಿಗಳನ್ನೇ ಪತ್ನಿಯರಂತೆ ಸಾಕೋ ಕ್ಯಾರೆಕ್ಟರ್ರು ಪರಿಚಯವಿತ್ತು. ನಮ್ಮೂರಿನಲ್ಲೇ ತನಗೆ ನಟಿ ಮಂಜುಳಾ ಮೇಲೆ ಪ್ರೇಮವಿತ್ತೆಂದು ಹೇಳಿಕೊಳ್ಳುತ್ತ, ಅವಳು ಸತ್ತಮೇಲೆ ಹುಚ್ವನೇ ಆದ ರಾಮಣ್ಣನ ಪ್ರೀತಿಯೇ ಅಗ್ದಿ ಹೆಮ್ಮೆ ಮಿಶ್ರಿತ ಕುತೂಹಲ ಹುಟ್ಟಿಸಿತ್ತು. ಅವನನ್ನ ನಾನು ನೋಡಿರದಿದ್ದರೂ ಕತೆ ಕೇಳಿ ಅವನ ಕ್ಯಾರೆಕ್ಟರ್ರು ಹೀಗೆ ಇದ್ದಿರಬಹುದೆಂಬ ಕಲ್ಪನೆಯಿತ್ತು. ಊರಿಗೇ ಜಾಸ್ತಿ ಕಲಿತಿದ್ದ ಅವನ ಕಲ್ಪನೆಯ ಹಿನ್ನೆಲೆಯಲ್ಲೇ ಈ ನಾಯಿಮಳ್ಳ ಕಂಡಿದ್ದ. ಅದೆಲ್ಲಿಂದಲೋ ಪ್ರತ್ಯಕ್ಷವಾದಂತೆ ನಾಯಿಮಳ್ಳ ಬಂದ. ಮಾತನಾಡಿಸೋ ತವಕ ಹುಟ್ಟಿತು. "ಎತ್ಲಾಗೆ ಹೊಂಟ್ಯೋ, ಹೊರೆ ನೆಗ್ತೀಯ?" ಎಂದು ಕೂಗಿ ಸವರಿ ಕೊರೆ ಹಾಕಿದ್ದ ಹುಲ್ಲನ್ನು ಕಟ್ಟಹತ್ತಿದೆ.
"ಅದ್ಕೆಂತದ್ರಾ, ನಿಮ್ ಪ್ರಾಯ್ದಾಗೆ ಬೆನ್ನೊರೆ ಹೊತ್ಕಂಡ್ ಅಚ್ಚೆದಿಂಬದ್ ಬೆಟ್ದಿಂದ ಮೆರ‍್ವಣ್ಗೆ ತುದಿಗೆ ಹೊರ‍್ತಿದ್ದೆ. ಈ ನಮ್ ಗೌರಿಗೆ ಆಸ್ರಾತಂತೆ, ಹಂಗಾಗಿ ನೀರ್ ಕುಡ್ಸುಕೆ ಕರ್ಕ ಹೊಂಟೆ" ಅಂತ ಸರಪಳಿಯ ನಾಯಿಯನ್ನ ಅಲ್ಲೇ ಇದ್ದ ಕೌಲು ಗಿಡಕ್ಕೆ ಸುತ್ತುತ್ತಾ ತನ್ನ ಮುಂಜಾನೆ ಪಯಣದ ಬಗ್ಗೆ ತಾನಾಗೇ ಮಾಹಿತಿಯಿತ್ತ. ಹೊರೆಯನ್ನ ನನ್ನ ತಲೆ ಮೇಲೆ ಇಡುವವರೆಗೂ ಹೊರೆಯ ಸುತ್ತ ಒಂದು ಪ್ರದಕ್ಷಿಣೆ ಹಾಕಿದ್ದ ಸಣಕಲು ನಾಯಿ ಕಾಲು ಎತ್ತುಲು ತಯಾರಾಗಿ ನಿಂತಾಗ "ಇನ್ನೂ ನೀರ್ ಕುಡ್ದಾಗ್ಲಾ, ಉಚ್ಚೆ ಬಂದೋತ ನಿಂಗೆ?" ಎಂದು ಗದರಿದಾಗ ಸಣಕಲು ನಾಯಿ ಗೌರಿ ಎಂಬುದು ಗೊತ್ತಾದಂತಾಯ್ತು. "ಎಲ್ಲಿಂದ ಬಂದ್ಯ? ಯಾವೂರ ನಿಂದು?" ಎಂದೆ, ಅವನ ಗೌರಿಯ ದಾಹ ತೀರಿಸುವ ಹೊಳೆ ನಾ ಹೊಂಟ ದಿಕ್ಕಲ್ಲೇ ಇದ್ದುದರಿಂದ ಜೊತೆಗೇ ಬಂದಿದ್ದ.
"ಇಲ್ಲೇ ಮೆರವಣ್ಗೇವ ನಾನು, ಸಣ್ಣಕಿದ್ದಾಗ ನಿಮ್ಮೂರ್ ಶೇರುಗಾರನ್ ಸಂತಿಗೆ ಕೆಲ್ಸಕ್ಕೆ ಬತ್ತಿದ್ದೆ. ಮಾಬ್ಲೇಸ್ರ್ ಹೆಗ್ಡ್ರಿಗೆಲ್ಲ ಸಂಕ್ರ ಅಂದ್ರೆ ಗೊತ್ತಿರ್ಗು. ನಿಮ್ಮನಿಗೂ ಒಂದೆರ್ಡ್ ಸಲ ಬಂದಿದ್ದೆ. ಮುವತ್ ವರ್ಷದ್ ಹಿಂದೆ ಬುಡಿ, ಈಗೆಲ್ಲಾ ನೆಂಪ್ ಇರ್ತದ್ಯ ಇಲ್ಲ" ಎಂದು ವಿವರ ಕೊಟ್ಟಿದ್ದ. ಇದೆಲ್ಲೋ ಲೋಕಲ್ ಕೇಸು ಅಂತ ಗೊತ್ತಾಗಿ ನನಗೂ ಕುತೂಹಲ ಸತ್ತಿತ್ತು. ಹೊಳೆಯೂ ಸಿಕ್ಕಂತಾಗಿ ಅವ ದೂರಾದ. ಅವನ ನಾಯಿಗಳು ಚಂದ್ರನ ನಾಯಿಯೊಟ್ಟಿಗೆ ಚೆನ್ನಾಗಿ ಆಟವಾಡ್ತವೆ ಅಂತ ಹೋಗಿದ್ದನೆಂದೂ, ಬಗಲ ಜೋಳಿಗೆಯ ಲಕ್ಷ್ಮೀ, ಸರಪಳಿಯ ಸರಸ್ವತಿ, ಸಣಕಲು ಗೌರಿಯೊಟ್ಟಿಗೆ ಮಡಿವಾಳರ ಚಂದ್ರನ ಸೀತೆಯೂ ಊರು ಬಿಟ್ಟಿದ್ದು ಆಮೇಲಿನ ಸುದ್ದಿ.
ಇಷ್ಟೇ ಆಗಿದ್ದರೆ ನಾಯಿಮಳ್ಳ ಸಂಕ್ರ ನನ್ನಿಂದ ನೆನಪಿಸಿಕೊಳ್ಳುತ್ತಿರಲಿಲ್ಲ. ಮೆರವಣಿಗೆ ನಮ್ಮೂರ ಗಡಿ ಹಂಚಿಕೊಂಡ ಊರು. ಮೆರವಣಿಗೆ ಸಣ್ಣಪ್ಪ ಹೆಗಡೇರ ಮನೆಯ ತುದಿ ಬಣ್ಣದ ಕಾಲುವೆ, ನಮ್ಮೂರ ಮಾಣಿ ಹೆಗಡೆಯ ಕಾಲುವೆ ಒಂದೇ. ಅಲ್ಲಿ ಬಿದ್ದ ಅಡಿಕೆ ಯಾರ ಪಾಲಿನದ್ದು ಎಂಬ ಪಂಚಾಯ್ತಿ ಪ್ರತಿವರ್ಷದ ವಾಡಿಕೆಯಾಗಿತ್ತು. ಅಂಥಾದ್ದರಲ್ಲಿ ಈ ಸಂಕ್ರನೆಂಬ ಮನುಷ್ಯ ಯಾರಿಗೂ ಗೊತ್ತಾಗದೆ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ? ಹಿಂಗೆ ಸಮಸ್ಯೆ ಶುರುವಾದದ್ದು ಚಂದ್ರನ ನಾಯಿ ಕಾಣೆಯಾದಾಗಿನಿಂದ. ನಮ್ಮೂರು ಪಶ್ಚಿಮ ಘಟ್ಟದ ತಪ್ಪಲು, ಗುರ್ಕೆ, ಕರಿ ಚಿರತೆಗಳು ಆಗಾಗ ಭೆಟ್ಟಿಯಿತ್ತು ನಾಯಿ, ಕರುಗಳನ್ನ ಹೊತ್ತೊಯ್ಯುತ್ತಿದ್ದರೂ ಕಳೆಬರವೂ ಕಾಣದಂತೆ ಮಾಯವಾಗುತ್ತಿರಲಿಲ್ಲ. ಒಂದು ನಾಯಿಯನ್ನ ಗುರ್ಕೆ ಹೊತ್ತುಕೊಂಡು ಹೋಯ್ತೆಂದರೆ ಊರಿನ ಎಲ್ಲ ನಾಯಿಗಳನ್ನು, ಕೊಟ್ಟಿಗೆಯ ಕರುಗಳನ್ನು ಪಹರೆ ಕಾಯುವಷ್ಟು ಭಯಾನಕ ರಾತ್ರಿಗಳು ಇಲ್ಲಿ ಶುರುವಾದಂತೆಯೇ ಲೆಕ್ಕ. ಆದರೆ ಸೀತೆಯೆಂಬ ನಾಯಿ ಮಾಯವಾಗಿದ್ದಕ್ಕೂ, ಸಂಕ್ರನ ಆಗಮನ-ನಿರ್ಗಮನಗಳಿಗೂ ಸಂಬಂಧವಿದೆ ಅನ್ನೋದು ನಾಯಿಯ ಕಳೆಬರ ಯಾವ ಗುರಗೆ ಮಟ್ಟಿಯಲ್ಲೂ ಸಿಗದೇ ಸಿದ್ಧವಾಗಿತ್ತು. ಆದರೆ ಅಸಲಿಗೆ ಸಮಸ್ಯೆಯಾಗಿದ್ದು ಸೀತೆಯ ವಾಪಸಾತಿಯಿಂದ!
ದೀಪಾವಳಿಯ ತಯಾರಿಗೆ ತಯಾರಾಗುತ್ತಿದ್ದ ಸಮಯವದು. ಬೆಳಿಗ್ಗೆಯ ಬೇಸಿಗೆ, ಸಂಜೆಯ ಚಳಿಗಾಲ, ರಾತ್ರಿಯ ಮಳೆಗಾಲಕ್ಕೆ ಊರಿಗೆಲ್ಲ ಅನಾರೋಗ್ಯ. ಗದ್ದೆಗೆ ಹಂದಿಕಾಟ, ಮಾಳ ಕಟ್ಟಿ ಕಾಯಬೇಕು. ನಾಯಿಗಳನ್ನ ಮಾಳದ ಕಂಬಕ್ಕೆ ಕಟ್ಟಿದರೆ ಧೈರ್ಯ ಚೂರು ಜಾಸ್ತಿ. ಹಿಂಗೆ ಮಾಳ ಕಾಯೋದು ಯುವಕರಿಗೆ ಮಜವಾದರೆ, ಪ್ರಾಯಸ್ಥರಿಗೆ ದಿನಚರಿಯ ಭಾಗ. ಆಗಷ್ಟೇ ಮುದುವೆಯಾಗಿದ್ದರಂತೂ ಬಿಡಿ, ವಿರಹದ ಹಾಡು ಮೊಬೈಲಲ್ಲಿ ಶುರುವಾಗಿ ಕುಂಬ್ರಿ ಗುಡ್ಡೆಯ ಬುಡಕ್ಕೆ ಬಡಿದು ವಾಪಸ್ಸು ಕೇಳುತ್ತಿತ್ತು.
ಗಪ್ಪತಣ್ಣನ ಮನೆ ಕರಿಯ ಅಂದ್ರೆ ಊರಲ್ಲಿ ಅಗ್ದಿ ಫೇಮಸ್ಸು. ನಾಲ್ಕೂವರೆ ಅಡಿ ಉದ್ದ, ಮೂರಡಿ ಎತ್ತರದ ದೈತ್ಯ ನಾಯಿ. ರಾತ್ರಿ ಸರ್ಚ್ ಲೈಟಿನ ಬೆಳಕು ಬಿಟ್ಟು ನೋಡಿದರೂ ಹಳದಿ ಕಂಗಳೆರಡು ಬಿಟ್ಟರೆ ಮತ್ತೇನೂ ಕಾಣದ ಅವನಿಗೆ ಕರಿಯ ಅನ್ನುವುದು ಹೆಸರೂ ಹೌದು, ಗುಣವಿಶೇಷಣವೂ ಹೌದು. ಮಾಳ ಕಾಯಲು ಗಪ್ಪತಣ್ಣನ ಜೊತೆ ಹೋಗಲು ಶುರುಮಾಡಿ ಎರಡೋ ಮೂರೋ ದಿನವಾಗಿತ್ತು. ಗಪ್ಪತಣ್ಣನ ಮಗ ಲೋಹಿತ ಆ ವರ್ಷವೇ ಮದುವೆಯಾಗಿದ್ದ. ತಂದೆಗೆ ಅನಾರೋಗ್ಯವೆಂದೋ, ಅಧಿಕ ಆಷಾಢವೆಂದೋ ಮಾಳದ ಪಾಳಿ ಇವನದ್ದಾಗಿತ್ತು. ಕರಿಯನಿಗೆ ಮನುಷ್ಯರ ಗೇವು ಜಾಸ್ತಿಯಿದ್ದಿದರಿಂದ ಕಟ್ಟಿಡುವ ಪದ್ಧತಿ ಇದ್ದಿರಲಿಲ್ಲ.
ದೊಡ್ಡಕೆ ಅರಿಜಿತ್ ಸಿಂಗನ ಹಾಡು ಹಚ್ಚಿಕೊಂಡು ವರಗಿದವನಿಗೆ ಎಚ್ಚರವಾದದ್ದು ರಾತ್ರಿ ಎರಡರ ಹೊತ್ತಿಗೆ. ಅನಾಮಧೇಯ ಹೊಳೆಗೆ ತಾಗಿಕೊಂಡೇ ಇದ್ದ ಮಕ್ಕಿಗದ್ದೆಯ ಕಡೆ ಆಗಷ್ಟೇ ತುಂಬಿಕೊಳ್ಳುತ್ತಿದ್ದ ಭತ್ತದ ತೆನೆಗಳ ತಿಕ್ಕಾಟದ ಸದ್ದು. ಬ್ಯಾಟರಿ ಬಿಟ್ಟು ನೋಡಿದರೆ ಏನೂ ಕಾಣಲಿಲ್ಲ, ಬಹುಶಃ ಕರಿಯ ಹಂದಿ ಗ್ವಾಲೆಯ ಹಿಂದೆ ಬಿದ್ದಿರಬೇಕು ಎಂದು ಮಲಗಿದೆ ಎಂದು ಲೋಹಿತಣ್ಣ ಹೇಳಿದ್ದ.
ನಸುಕಿಗೆ ಎದ್ದು ವಾಪಾಸು ಮನೆಗೆ ಹೊಂಟವನಿಗೆ ಕರಿಯ ಎಲ್ಲಿ ಹೋದ ಎಂಬ ಚಿಂತೆ. ಹಂದಿಗಳನ್ನು ಬೆನ್ನತ್ತಿ ಹೋಗಿರಬಹುದು, ಆಸ್ರಿಗೆ ಹೊತ್ತಿಗೆ ಮನೆಗೆ ಬರುತ್ತಾನೆ ಎಂದು ಸುಮ್ಮನಾದ. ಮನೆಗೆ ಬಂದು ಕೊಟ್ಟಿಗೆ ಕಡೆ ಕೆಲಸ ಮುಗಿಸಿ ನಾಲ್ಕು ತಳ್ಳೇವು ತಿಂದಮೇಲೆ ಕರಿಯನ ನೆನಪಾಗಿತ್ತು. ವಿಚಾರಿಸಿದರೆ ಇನ್ನೂ ಬಂದಿಲ್ಲವೆಂಬ ಉತ್ತರ ಬಂತು. ಶ್ರಾವಣ ಮಾಸದಲ್ಲಿ ಹೀಗೆ ಒಪ್ಪತ್ತುಗಟ್ಟಲೆ ಮಾಯವಾಗುತ್ತಿದ್ದನಾದ್ರೂ ಕಳೆದ ಬೇಸಿಗೆಯಲ್ಲಿ ಬ್ಯಾಳೆ ಒಡೆಸಿದಮೇಲೆ ಹಿಂಗೆ ಮಾಯವಾಗಿರಲಿಲ್ಲ. ಹೋದದ್ದು ಯಕಶ್ಚಿತ್ ನಾಯಿಯಾದ್ದರಿಂದ ಹಡ್ಬೆ ನಾಯಿಯೆಂದು ಬೈದು ಸುಮ್ಮನಾದ. ಹೆದರಿದ್ದು, ಸಂಜೆಯೂ ಬರದೇ ಒಬ್ಬನೇ ಮಾಳಕ್ಕೆ ಹೋಗುವ ಪ್ರಸಂಗ ಬಂದಾಗ.
ಚಂದ್ರನ ನಾಯಿಯೂ ಹಿಂಗೇ, ನಾಯಿ ಮಳ್ಳ ಊರು ಬಿಟ್ಟ ಮಾರನೇ ದಿನ ಕಳೆದದ್ದು ಎರಡು ದಿನ ಬಿಟ್ಟು ಬಂದಿತ್ತು. ಆದರೆ ಸುರಳೀತ ಬಂದಿರಲಿಲ್ಲ. ಕುತ್ತಿಗೆಯ ಒಂದು ಕಡೆ ಚರ್ಮವೇ ಇರಲಿಲ್ಲ. ಬಾಲದಿಂದ ಒಂದರ್ಧ ಫೂಟು ಮುಂದೆ ಮುರಿದಂತಿತ್ತು. ಎಡಗಿವಿ ಹರಿದು ಜೋಲುತ್ತಿತ್ತು. ಬಾಯಲ್ಲಿ ಬಿಳೀ ಜೊಲ್ಲು. ಯಾವುದೋ ಹುಚ್ಚು ನಾಯಿ ಊರಿಗೆ ಬಂತೆಂದೂ, ಯಾರಿಗಾದರೂ ಕಚ್ಚುವ ಮೊದಲೇ ಹೊಡೆದು ಹಾಕಬೇಕೆಂದು ಹೇಳಿ ಗಪ್ಪತಣ್ಣನೇ ಹಾಯಗದ ಹೆಣೆ ಕಡಿದು ಬುರುಡೆ ಒಡೆದದ್ದನ್ನು ಲೋಹಿತನಿಗೆ ನೆನಪಿಸಿದ್ದು ಚಂದ್ರಣ್ಣ. ಕರಿಯನದ್ದೂ ಅದೇ ಕತೆಯಾದೀತೇ ಎಂದು ಹೆದರಿಕೊಂಡೇ ಅರೆಬರೆ ನಿದ್ರೆ ಮಾಡಿ ಮಾಳ ಕಾದದ್ದಾಯ್ತು. ನಿರೀಕ್ಷಿಸಿದಂತೇ ಮಾರನೇದಿನ ಮಧ್ಯಾಹ್ನ ಕರಿಯ ಊರ ಬಸ್‌ಸ್ಟಾಪಿನ ಎದುರು ಕಾಣಿಸಿಕೊಂಡಿದ್ದ! ಹರಕು ಕಿವಿ, ಮುರುಕು ಬೆನ್ನು, ಕುತ್ತಿಗೆಯ ಅರ್ಧ ಚರ್ಮ ಕಿತ್ತಿತ್ತು. ಬಿಳೀ ಜೊಲ್ಲು! ಕರಿಯನಂಥ ಕರಿಯನನ್ನು ಹೊಡೆದು ಹಾಕಲು ಹಾಯಗದ ದೊಣ್ಣೆ ಸಾಕಾದೀತೇ? ನಡುದಲೆಗೆ ದೊಣ್ಣೆ ಬೀಸಿದರೂ ಗಾಯವಾಯಿತಷ್ಟೇ. ಪ್ರತಿಯಾಗಿ ಅಗ್ದಿ ಮನುಷ್ಯರ ಗೇವಿನ ಕರಿಯ ವ್ಯಗ್ರನಾಗಿ ಜನರನ್ನೇ ಬೆದರಿಸಿಕೊಂಡು ಬಂದು ಬಸ್ ಸ್ಟಾಪಿನ ಮಾಡನ್ನೂ, ಬದಿಯ ಹಲಸಿನ ಮರವನ್ನೂ ಏರುವಂತೆ ಮಾಡಿದ್ದ. ಬಹಳ ಹೊತ್ತು ಕಾದು ಯಾರೂ ಇಳಿಯದಿದ್ದಾಗ ಅವನೇ ಹೋಗಿದ್ದ. ಎರಡು ದಿನ ಊರವರೆಲ್ಲ ಕರಿಯನ ಭಯಕ್ಕೆ ಮನೆಯಿಂದ ಹೊರಬೀಳುವುದೇ ಬಿಟ್ಟರು. ಗಂಡಸರು, ಧೈರ್ಯವಂತರು ಹೊರಬರುತ್ತಿದ್ದರಾದ್ರೂ ಕತ್ತಿಯನ್ನು ಅಂಡಗೊಕ್ಕೆಗೆ ಸಿಕ್ಕಿಸಿಕೊಳ್ಳದೇ ಕಯ್ಯಲ್ಲೇ ಹಿಡಿದು ಓಡಾಡುತ್ತಿದ್ದರು. ಅಂತೂ ನರಸಿಂಹಣ್ಣನ ಸೊಪ್ಪುಗತ್ತಿ ಕರಿಯನ ಹತ್ಯೆ ಮಾಡಿತ್ತು.
ಇನ್ನೇನು ಕರಿಯನ ಕಾಟ ಮುಗೀತು ಅಂತ ಊರವರೆಲ್ಲ ಆರಾಮು ತೆಗೆದುಕೊಳ್ಳುವುದರೊಳಗೆ ಮದಣ್ಣನ ಮನೆಯ ಕೆಂಪ, ಯೋಗೀಶಣ್ಣನ ಮನೆಯ ಪಂಡು, ದಿನೇಶನ ಮನೆ ಗುಂಡ, ಹರಿಜನ ಕೇರಿಯ ಅನಾಮಧೇಯ ನಾಲ್ಕೈದು ನಾಯಿಗಳು ಸೇರಿದಂತೆ ಎಲ್ಲವೂ ಬಿಳಿ ನೊರೆಯನ್ನು ಬಾಯಿಯಿಂದ ಬೀಳಿಸುತ್ತಾ ಗೊರ್ರ್ ಅನ್ನುತ್ತ ತಿರುಗತೊಡಗಿದವು. ನಾಯಿಗಳನ್ನು ಹೊಡೆಯಲೆಂದೇ ಮೆರವಣಿಗೆಯೂ ಸೇರಿದಂತೆ ಮೂರ್ನಾಲ್ಕು ಹಳ್ಳಿಗಳ ತಂಡವೊಂದನ್ನು ರಚಿಸಬೇಕಾಯ್ತು. ಹಾಗೆ ನೋಡಿದರೆ ನಾಯಿ ರೋಗದಿಂದ ಹೆಚ್ಚು ಹಾನಿಯಾದದ್ದು ಮೆರವಣಿಗೆ ಊರವರಿಗೇ. ಬಾಳೆಗೊನೆಗಳಿಗೆ ಕಾವಲಿರದೇ ಮಂಗಗಳ ಪಾಲಾಯ್ತು, ಗದ್ದೆಗೆ ಹಂದಿಗಳ ದಾಳಿ ಹೆಚ್ಚಾಯ್ತು, ತೋಟಕ್ಕೆ ಕಳ್ಳರ ಕಣ್ಣು ಬಿತ್ತು. ಮೆರವಣಿಗೆ ಅನ್ನೋ ಸಮೃದ್ಧ ಊರು ದಿವಾಳಿಯ ಹಂತಕ್ಕೆ ಬಂದಿತ್ತು ಅಂದ್ರೆ ಅಂದಾಜು ಮಾಡಿ!
ಅಂತೂ ವಾರಗಟ್ಟಲೆ ನಾಯಿ ಬೇಟೆಯ ನಂತರ ಕಾಟ ನಿಯಂತ್ರಣಕ್ಕೆ ಬಂತು. ಪಂಜರದಲ್ಲೇ ಬದುಕನ್ನ ಕಳೆದ ಒಂದೆರಡು ನಾಯಿಗಳನ್ನ ಬಿಟ್ಟರೆ ಎಲ್ಲಾ ನಾಯಿಗಳು ಸತ್ತಿದ್ದವು. ಮತ್ತೆ ಒಂದು ದಿನ ನಾಯಿ ಮಳ್ಳ ಪ್ರತ್ಯಕ್ಷನಾದ. ದೊಡ್ಡಕೆ ಹಾಡು ಹೇಳುತ್ತಿದ್ದ. ತನ್ನದೇ ರಚನೆಯ ಹಾಡನ್ನು ತನ್ನದೇ ಸಂಗೀತ ಸಂಯೋಜನೆಯಲ್ಲಿ ಒದರುತ್ತಿದ್ದ.

ಮೂರು ಕುನ್ನಿ
ಒಂದು ಚೈನು
ಊರಿಗೆ ಬಂದ
ನಾಯಿ ಮಳ್ಳ

ಲಕ್ಷ್ಮಿಯ ಕತ್ತಿಗೆ
ಕಬ್ಬಿಣ ಸರಪಳಿ
ಸರಸಿ ಮೈಗೆ
ಬಗೆ ಬಗೆ ಕಜ್ಜಿ
ಗೌರಿಯ ದೇಹ
ಜೋಳಿಗೆಯೊಳಗೆ
ಊರಿಗೆ ಬಂದ
ನಾಯಿ ಮಳ್ಳ

ಚಂದ್ರನ ಕುನ್ನಿ
ನೋಡಲು ಚೆಂದ
ಗೌರಿಯ ಆಟ
ಮತ್ತೂ ಅಂದ
ನಾಲ್ಕರ ಜೊತೆಗೆ
ಐದನೆ ನಾಯಿ
ಊರಿಗೆ ಬಂದ
ನಾಯಿ ಮಳ್ಳ

ಕಂತ್ರಿ ನಾಯಿಗೆ
ದೆವ್ವದ ಕಾಟ
ಗುರ್ಕೆಯ ಕಣ್ಣು
ಜಾತಿಯ ಮೇಲೆ
ನಾಯಿ ಮಳ್ಳಗೆ
ಎಲ್ಲವು ಅಕ್ಕು
ಕುನ್ನಿಯ ಕತೆಯು
ಯಾರಿಗೆ ಬೇಕು!

ಮುದ್ದಿನ ನಾಯಿಯ
ತಲೆಯನ್ನೊಡೆದರು
ಮಾಳದ ಕಾಲಿಗೆ
ಹಗ್ಗವ ಬಿಗಿದರು
ಮಂಗನ ಬಾವಿಗೆ
ನಾಯಿಯೆ ಬಲಿಯು
ಊರಿನ ಜನರ
ತೆವಲಿಗೆ ದೇವರು!

ನಾಯಿಮಳ್ಳ ಊರೊಳಗೆ ಕಾಲಿಡುತ್ತಿದ್ದಂತೇ ನಾಯಿಗಳ ಶವದ ವಾಸನೆ ಗಪ್ಪನೆ ಬಡಿಯಿತು. ಹಿತ್ತಲ ಬೇಲಿಯಂಚಿಗೆ ನಿಂತು ಸುದ್ದಿ ಹೇಳುತ್ತಿದ್ದ ಹೆಂಗಸರೆಲ್ಲರೂ ಮನೆಯೊಳಕ್ಕೆ ಹೊಕ್ಕಿ ಬಾಗಿಲು ಬಡಿದುಕೊಂಡರು. ಕೊಟ್ಟಿಗೆಯ ದನಗಳು ಕೂಗತೊಡಗಿದವು. ಎಲ್ಲಿಯದೋ ಸಾವಿನ ಸುದ್ದಿ ಅರಹುವಂತೆ ಗುಮ್ಮನಕ್ಕಿಗಳು ಕೂಗತೊಡಗಿದವು. ಹಾಯಗದ ಮರ ಎಲೆಯುದುರಿಸಿದ್ದವು. ನಾಯಿಮಳ್ಳ ಊರುಬಿಟ್ಟ, ವಾಸನೆ ಮಾತ್ರ ಹಾಗೇ ಇತ್ತು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ