ಮುಳ್ಳಂದಿ ಅಂಬು ಮತ್ತು ಎಂಟು ತಿಂಗಳು

“ಇಲ್ಲಿಯ ಅಡಿಕೆಗೊನೆಗಳಿಗೆ ಚೌಡೇಶ್ವರಿಯ ಕಾವಲಿದೆ. ತೋಟದ ತುದಿಯ ವಾಟೆಮಟ್ಟಿಗೆ ಹೊಕ್ಕಿದ ಹೆಂಗಸರಿಗೆ ಯಾವ ಕಾವಲೂ ಇಲ್ಲ."
ಹೀಗೆ ಎರಡು ವಾಕ್ಯಗಳನ್ನು ಓದಿಸುತ್ತಿತ್ತು ಆ ತಂತಿ ಬೇಲಿಯ ಅಂಚಿನ ಅಡಿಕೆ ಮರಕ್ಕೆ ತೂಗುಬಿಟ್ಟಿದ್ದ ಒಂದು ಚದರಡಿಯ ಬೋರ್ಡು. ರಾಮ ಎದುರುಸಿರು ಬಿಟ್ಟುಕೊಂಡು ಬಂದಾಗ ವಿಷಯದ ಗಾಂಭೀರ್ಯತೆ ಇಷ್ಟಿರಬಹುದು ಎಂಬ ನಿರೀಕ್ಷೆಯಿದ್ದಿರಲಿಲ್ಲ.
ಒಂದು ಉದ್ದನೆಯ ಉಸಿರ ಒಳಗೆಳೆದು ಬಿಟ್ಟ ಮಂಜ್ನಾಥ ಹೆಗಡೆ. ಹಿಂದೆಯೇ “ಅದ್ರಜ್ಜಿಕುಟಾ" ಎಂಬ ಉದ್ಗಾರ, ತುಸು ಕೋಪದಿಂದೆಂಬಂತೆ.
‘ಗಂಗಾ...’ ಸೊಪ್ಪಿನ ಬೆಟ್ಟದಲ್ಲಿ ರಾಮನ ಕೂಗು ಮೊಳಗಿದಾಗ ಕರೆಯ ಉದ್ದೇಶ ಸ್ಪಷ್ಟವಾಗಿತ್ತು. ಉದ್ದ ತೋಳಿನ ಗಂಡಸರ ಅಂಗಿ, ಸೊಂಟಕ್ಕೊಂದು ಸವಕಲು ಟುವಾಲು ಸುತ್ತುಕೊಂಡಿದ್ದ ಕಪ್ಪುಗಂಗಳ ಗಂಗಾ ನೀರಿನ ಉಗ್ಗ ಇಟ್ಟಿದ್ದ ಹೊನ್ನೆಮರದ ಬುಡದತ್ತ ಹೊಂಟಳು.
ಮರದ ಹೆಣೆಗಳ ಜೊತೆ ಕತ್ತಿಗಳ ಗುದ್ದಾಟದ ಸದ್ದು ಆಲಿಸಿ, ಹಿಂಬಾಲಿಸಿ ರಾಮ ಬೆಟ್ಟ ತಲುಪಿದ್ದ.
“ಹಗೀರ್ ಮನಿ ಕೆಲ್ಸನೂ ಸಾಕು, ಕಿತ್ರಾಬಿದ್ ಓಡೂದೂ ಸಾಕು", ರಾಮ ಗೊಣಗಿಕೊಂಡ.
“ಎಂತಕ್ಕೆ ಕರ್ದೆ?" ಗಂಗಾಳ ನೇರ ಪ್ರಶ್ನೆ, ಹಾಯಗದ ಎಲೆಗೆ ಬಳಿದಿದ್ದ ಬೆಲ್ಲವ ಖಾಲಿ ಮಾಡುತ್ತಾ ಹೊರಬಂತು.
“ಮಂಜ್ನಾತೆಗ್ಡ್ರು ಕರೀತವ್ರೆ, ಬ್ಯಾಗ್ ಬರೂಕಂದ್ರು", ರಾಮ ಬಂದ ಕೆಲಸ ಮುಗಿಸಿದ.
“ಈಗಾಗೂದಿಲ್ಲಾ, ಭಟ್ರ್ ಸೊಪ್ ಕಡಿಬೋಕು" ಅಂದು ಗಂಡಾಳುಗಳು ಮರಹತ್ತಿ ಕಡಿದು ಕೆಡಗಿದ್ದ ಭಾರೀ ಟೊಂಗೆಗಳ ಜೊತೆ ಯುದ್ಧಕ್ಕೆ ಹೊರಟಳು ಗಂಗಾ.
***
ಈಗೇಳು ತಿಂಗಳ ಹಿಂದಿನ ಮಾತು. ಮೆರವಣಿಗೆ ಊರ ತುಂಬೆಲ್ಲ ಸತ್ತ ರೇಣುಕೆಯದೇ ಸುದ್ದಿ. ಬೆನ್ನ ಕೆಳಭಾಗದಲ್ಲಿ ಮುಳ್ಳುಹಂದಿಯ ಒಂದೂವರೆ ಅಡಿ ಉದ್ದದ ಅಂಬು ಹೊಕ್ಕಿತ್ತು. ಕುಂಬ್ರಿ ಗುಡ್ಡೆಯ ಬುಡಕ್ಕೆ ಫಾರೆಸ್ಟಿನವರು ತಂದು ಸುರಿದ ಇಪ್ಪತ್ತು ಚಿಲ್ಲರೆ ಸಾವಿರ ಅಕೇಶಿಯ ಸಸಿಗಳಿಗೆ ಗುಂಡಿ ಹೊಡೆವ ನೌಕರಿ ರೇಣುಕಾಳದ್ದು.
ಮೆರವಣಿಗೆ ಊರ ಒಕ್ಕಲಿಗರ ಕೇರಿಗೇ ಹೆಚ್ಚು ಕಲಿತಾಕೆ ರೇಣುಕಾ. ಹತ್ತನೇ ಇಯತ್ತೆಯ ಪಬ್ಲಿಕ್ ಪರೀಕ್ಷೆಗೆ ಹೋಗದಿದ್ದರೂ ಲೆಕ್ಕದಲ್ಲಿ ಶೇರೂಗಾರ ಮಾದೇವನಿಗಿಂತ ಅಗ್ದಿ ಪರ್ಫೆಕ್ಟ್. ಆಗಾಗ ಹೊರಬರುವ ಅಸ್ಪಷ್ಟ ಇಂಗ್ಲಿಷ್ ಪದಗಳು ಅವಳ ಮಾತಿಗೆ ತೂಕ ನೀಡುತ್ತಿದ್ದವು. ಹಿಂಗಿದ್ದ ರೇಣುಕಾಳ ಸಾವು ಅನೂಹ್ಯ. ಕಾಡಹೂವೊಂದು ಬಾಡಿತ್ತು, ಒಣಗದೇ ಉದುರಿತ್ತು. ಉದುರಿ ಬೀಳುವ ಮುನ್ನ ಹೂವ ಗಂಧವನ್ನಾರೋ ಆಘ್ರಾಣಿಸಿದ್ದರು! ಸಾಯುವ ಹೊತ್ತಿಗೆ ನಡೆದಿತ್ತದು... ಅತ್ಯಾಚಾರ!
***
ಮಂಜ್ನಾಥ ಹೆಗಡೇರ ಹೇಡಿಗೆಯ ಮೇಲೆ ಸದಾ ಕಸ ಉದುರಿಸುವ ಅಟ್ಟದಡಿ ಗಂಗಾ ಕುಳಿತಿದ್ದಾಳೆ. ಕೈಯಲ್ಲೊಂದು ಲೋಟ, ಬಾಯಿಗೆ ಬಡಿದಿದ್ದ ಬೆಣ್ಣೆ ಆ ಲೋಟದಲ್ಲಿ ಮಜ್ಜಿಗೆ ಇದ್ದಿತ್ತೆಂಬುದಕ್ಕೆ ಸಾಕ್ಷ್ಯ ನುಡಿದಿತ್ತು.
“ಅಲ್ದೇ, ನಮ್ಮನೆ ತ್ವಾಟದ್ ತುದಿಗೆ ಆ ಬೋರ್ಡ್ ಎಂತಕ್ಕಾರೂ ಹಾಕ್ದೆ ಮಾರಾಯ್ತಿ?" ಮಂಜ್ನಾಥ ಹೆಗಡೆ ಹೆಂಡತಿ ಸುಬ್ಬಲಕ್ಷ್ಮೀ ಪತಿಯ ಅನುಪಸ್ಥಿತಿಯಲ್ಲಿ ವಿಚಾರಣೆ ಶುರು ಮಾಡಿದಳು.
ಸುಬ್ಬಲಕ್ಷ್ಮೀ ಕೇಳಿದ ಪ್ರಶ್ನೆಗೆ ಉತ್ತರಿಸದೇ, “ತಟ್ಟೆ ತೊಳೂಕೆ ಬಿಶ್ನೀರ್ ಇದ್ದ?" ಎಂದಳು ಗಂಗಾ. ಮುಖದ ಬಿಗುವಿನ ನಡುವೆ ಮೂಡಿದ ರೇಖೆಗಳು ಸುಬ್ಬಲಕ್ಷ್ಮೀಯ ನಿರೀಕ್ಷೆಗಳಿಗೆ ತಿರಸ್ಕಾರ ಸೂಚಿಸಿದ್ದವು.
ಹೇಡಿಗೆ ತುದಿಯಲ್ಲಿ ತಟ್ಟೆ ತೊಳೆಯುತ್ತಿದ್ದವಳಿಗೆ ಮಂಜ್ನಾಥ ಹೆಗಡೆಯ ಹೆಜ್ಜೆಸಪ್ಪಳ ಕೇಳಿಸಿತು. ಅಷ್ಟು ಭಾರದ ಹೆಜ್ಜೆ ಊರಲ್ಲಿ ಮತ್ತೊಬ್ಬರದಿಲ್ಲ. ಅಷ್ಟು ದೊಡ್ಡ ಆಳ್ತನ ಮೂವತ್ತರ ಪ್ರಾಯದ ಮಂಜ್ನಾಥನದು. ಭರ್ತಿ ಮೆಟ್ಟಿ ತುಂಬಿದ ಒಂದಿಡೀ ಗೊಬ್ಬರ ಚೂಳಿಯನ್ನು ಅನಾಮತ್ತು ಎತ್ತಿ ಆಳಿನ ತಲೆಮೇಲೆ ಇಡುವ ಅಟಾಪು ಅವನದ್ದು. ದೊಡ್ಡ ಹೆಗಡೇರ ಆಳ್ತನವೂ ಕಮ್ಮಿಯಲ್ಲ. ಪ್ರಾಯದಲ್ಲಿ ಆಚೆ ದಿಂಬದ ಗುಡ್ಡ ಅಗೆದು ತೋಟದ ನಿತ್ಗಟ್ಟು ಹೊಯ್ದಿದ್ದರಂತೆ, ಏಕಾಂಗಿಯಾಗಿ! ಯಾವತ್ತೂ ಮಂಜ್ನಾಥ ಹೆಗಡೆಯ ವಿರೋಧ ಕಟ್ಟಿಕೊಳ್ಳುವ ಇರಾದೆ ಆಳುಗಳಲ್ಲಿ ಇರಲಿಲ್ಲ. ಗಂಗೆಗೂ ಇರಲಿಲ್ಲ ಬಿಡಿ. ಮಂಜ್ನಾಥ ಹೆಗಡೆ ಕೊಟ್ಟ ಮಾತಿನಂತೆ ನಡೆದಿದ್ದರೆ...
***
ರೇಣುಕಾ, ಕುಂಬ್ರಿಗುಡ್ಡೆಗೆ ಅಕೇಶಿಯಾ ನೆಡುವ ಗುತ್ತಿಗೆ ಪಡೆದು ತಿಂಗಳಾಗುತ್ತಾ ಬಂದಿತ್ತು. ಇನ್ನೊಂದು ಇನ್ನೂರು ಸಸಿ ನೆಟ್ಟಿದ್ದರೆ ಮುಗಿಯುತ್ತಿತ್ತೇನೋ, ಆಳುಗಳೆಲ್ಲಾ ಕೈಕೊಟ್ಟಿದ್ದರಿಂದ ತಡವಾಗಿತ್ತು.
ಆವತ್ತೊಂದಿನ, ಗುಡ್ಡೆಯ ತಂತಿಬೇಲಿಯ ಒಳಗೆ ಸರಿಯಲಾಗಿದ್ದ ಅಜಮಾಸು ಇನ್ನೂರು ಸಸಿಗಳು ಕಾಣೆಯಾಗಿದ್ದವು! ಇಂಥದ್ದೆಲ್ಲಾ ಮಾಡುವವ ಬಾಲು ಮಾತ್ರ. ಮೆರವಣಿಗೆಯ ಕುಖ್ಯಾತ ಕಳ್ಳ. ಮದುವೆಯಾಗಿದೆ. ಬದುಕಲು ಸಾಕಂಬಷ್ಟು ತೋಟವೂ ಇದೆ. ಕಳ್ಳತನ ಜೀವನ ನಿರ್ವಹಣೆಗೆ ಅನಿವಾರ್ಯವಲ್ಲ, ಕುಡಿತಕ್ಕೆ ಅವಶ್ಯಕವಾಗಿತ್ತು.
ಸಂಜೆ ಒಣ ಕಟ್ಟಿಗೆ ಒಟ್ಟುಮಾಡಲು ಗುಡ್ಡೆಗೆ ಹೋದಾಗ ರೇಣುಕಾಗೆ ಈ ಕಳ್ಳತನ ಗಮನಕ್ಕೆ ಬಂದಿತ್ತು. ಮೊನ್ನೆಯಷ್ಟೇ ಹೊಸದಾಗಿ ಬಂದಿದ್ದ ಫಾರೆಸ್ಟ್ ಗಾರ್ಡ್ ಮಾದೇವನಿಗೆ ವಿಷಯ ಮುಟ್ಟಿಸಿದ್ದು ರೇಣುಕಾಳೇ.
***
ಹೆಣ! ರಕ್ತ!
ಪೊಲೀಸರೂ ಹೆದರುವಂತಿತ್ತು ದೃಶ್ಯ. ಬೆತ್ತಲೆ ದೇಹದ ಹೊಕ್ಕಳಿನ ಬದಿಗೆ ಹಾದುಹೋಗಿತ್ತದು... ಮುಳ್ಳು ಹಂದಿಯ ಕೊಂಬು. ಬೆಟ್ಟದ ಬುಡಕ್ಕೆ ಹರಿದು ತಂಪಾಗಿಸಿದ್ದ ಹೊಳೆಯ ಸೆರಗಿನಲ್ಲಿ ಬೆಳೆದಿದ್ದ ವಾಟೆ ಮಟ್ಟಿಯ ನಡುವಲ್ಲಿ ಕಂಡಿತ್ತು ಹೆಣ. ಮೊದಲು ನೋಡಿದ್ದು ಯಾರು? ಅಲ್ಯಾಕೆ ಆ ವ್ಯಕ್ತಿ ಹೋಗಿದ್ದ? ಎಲ್ಲದಕ್ಕೂ ಉತ್ತರವಿದೆ. ಹೇಳುತ್ತೇನೆ ಕಾಯಿರಿ.
ಬೆಳಿಗ್ಗೆ ಎಂಟುಗಂಟೆಗೇ ಫೋನು ಬಂದಿತ್ತು. ಹೀಗೊಂದು ಕ್ರೈಂ ಇದೆಯೆಂದೂ, ನಿಮಗೇ ಮೊದಲು ಹೇಳಿದ್ದೆಂದೂ ನೂರಾ ಎಂಟರ ಚಾಲಕ ಫೋನ್ ಮಾಡಿದ್ದ. ರಿಪೋರ್ಟರ್‌ಗೆ ಹೇಳಿದರೆ ಸುಮ್ಮನೇ ಪೆಟ್ರೋಲ್ ಖರ್ಚು. ಮೆರವಣಿಗೆ ಎಂಬ ಊರು ನಮ್ಮನೆಯಿಂದ ದೂರವೂ ಅಲ್ಲ. ಆಸರಿಗೆ ಕುಡಿದು ತೋಟಕ್ಕೆ ಹೊಂಟವ ಹಂಗೇ ನನ್ನ ಜ್ಯುಪಿಟರನನ್ನು ಹತ್ತಿ ಹೊಂಟಿದ್ದೆ. ಸ್ಥಳಕ್ಕೆ ಹೋಗಿ ನೋಡಿದರೆ ಪರಿಚಯದ ಮುಖವೇ ಹೆಣವಾಗಿತ್ತು.
ನಾ ನೋಡಿದ ಮೊದಲ ಶವ ಅದಲ್ಲ. ಭರ್ತಿ ಲೋಡಾಗಿದ್ದ ಲಾರಿಯಡಿ ಸಿಲುಕಿ ಮುದ್ದೆಯಾಗಿದ್ದ ದೇಹವನ್ನು ರಾತ್ರಿ ಎರಡು ಗಂಟೆಗೆ ಹೋಗಿ ನೋಡಿದ್ದೆ. ಆದರಿದು ಮತ್ತೂ ಅಸಹ್ಯ ಹುಟ್ಟಿಸುವಂತಿತ್ತು. ಬರೀ ಸಾವಲ್ಲ, ಅವಳ ಮೇಲೆ ಅತ್ಯಾಚಾರವಾಗಿತ್ತು... ರೇಣುಕಾಳ ಮೇಲೆ.
ಮೃತಳ ವಿವರ ಪಡೆದು ಹೊರಡುವಾಗ ಮಂಜ್ನಾಥ ಬಂದಿದ್ದ. ಸ್ವಲ್ಪ ಕಲಿತವ, ಓದಿ ತಿಳಿದವ, ಪ್ರಭಾವಿ ವ್ಯಕ್ತಿಯೂ ಹೌದು ಎಂಬಂಥವ. ಸಿಕ್ಕಾಗೆಲ್ಲಾ, “ಎಂತದ್ರೋ ಎಂತಾ ಸುದ್ದಿ ಜಪ್ಪಲೆ ಬಂಜ್ರಿ?’ ಎನ್ನುವವ ಇವತ್ತು ಸುಮ್ಮನಿದ್ದ. ಆತನ ಮಧ್ಯಸ್ತಿಕೆಯ ನಂತರ ಬರೀ ಸಾವೆಂದು ರಿಪೋರ್ಟ್ ಬರೆಯಲಾಯಿತು. ಅತ್ಯಾಚಾರ ಪ್ರಕರಣ ಅಂತಾದರೆ ಊರ ಹೆಸರು, ಸತ್ತ ರೇಣುಕೆಯ ಹೆಸರು ಹಾಳಾಗಬಹುದೆಂಬ ಕಾಳಜಿ ತೋರಿಸಿದ್ದ ಮಂಜ್ನಾಥ.
ಆಗಲೇ ರೇಣುಕಾಳ ತಾಯಿ ಗಂಗೆಯ ಕ್ರೋಧಕ್ಕೆ, ರೋಧನೆಗೆ ಮಂಜ್ನಾಥ ಸಾಂತ್ವನ ಹೇಳಿದ್ದು. “ಇದು ಯಾರೇ ಮಾಡಿದ್ದಾಗ್ಲಿ, ಹುಡ್ಕಿ ನಿನ್ ಮಂದೆ ತಂದ್ ನಿಲ್ಸ್ತೆ. ಅವಂಗೆ ಎಂತ ಮಾಡ್ತೆ ಮಾಡು, ಹೆದ್ರೂದ್ ಬ್ಯಾಡಾ" ಅಂದಿದ್ದ.
***
ಮಜ್ಜಿಗೆ ತಟ್ಟೆ ತೊಳೆದು ಹಂಗೇ ಹೇಡಿಗೆಯ ಮೇಲೆ ಕುಂತವಳ ಕಣ್ಣಲ್ಲಿ ನೀರು ಜಿನುಗಿದ್ದಿರಬಹುದು. ಮಂಜ್ನಾಥ ಹೆಗಡೇರ ಗಮನಕ್ಕೆ ಬಂದಿರಬಹುದು. ಲೆಕ್ಕವಿಡದ ಮೌನಕ್ಕೆ ಹತ್ತು ನಿಮಿಷದ ಪ್ರಾಯ ಉಕ್ಕಿತ್ತೇನೋ, ಮಂಜ್ನಾಥ ಹೆಗಡೆಯೇ ಮಾತನಾಡಿದ್ದು.
“ನಾ ಎಂತ ಸುಮ್ನೆ ಕುಂತಿದ್ನೇನೆ?" ಮಂಜ್ನಾಥನ ಮಾತಲ್ಲಿ ತಾನೇನೂ ಮಾಡಿಲ್ಲ ಎಂಬ ಕೊರಗೂ ಇತ್ತು.
“ಯೋಳ್ ತಿಂಗ್ಳಾತು ಹೆಗ್ಡ್ರೆ" ಗಂಗೆ ಕೊಟ್ಟಿದ್ದು ತಿಂಗಳ ಲೆಕ್ಕವನ್ನಲ್ಲ, ಅವಳೊಡಲ ಬೆಂಕಿಯ ಪ್ರಾಯವನ್ನ ಹೇಳಿದಂತಿತ್ತು. ತೀಕ್ಷ್ಣ, ಸ್ಪಷ್ಟ ಹಾಗೂ ನಿರಾಸೆಯ ದನಿ ಹೊರಬಂದಿತ್ತು.
“ನಾ ಎಂತ ಮಾಡೂದು ಈಗ?" ಮಂಜ್ನಾಥನ ಅಸಹಾಯಕತೆ ಇಷ್ಟೇ ಪದಗಳಲ್ಲಿ ಖಾಲಿಯಾಗಿತ್ತು. ಮತ್ತದೇ ಮೌನಕ್ಕೆ ನಾಂದಿ ಹಾಡಿತ್ತು.
***
ಮನೆಯೊಳಗೂ ಸಿಗ್ನಲ್ಲು ಬರಹತ್ತಿದ ಮೇಲೆ ನಾನು ಮತ್ತಷ್ಟು ಸೋಮಾರಿಯಾಗಿದ್ದೆ. ಬೆಳಿಗ್ಗೆ ಏಳುಗಂಟೆಗೆಲ್ಲಾ ಎದ್ದು ಹೆಂಡತಿ ಮಾಡಿಹಾಕುವ ತಳ್ಳೇವು ತಿಂದು, ಮೊಬೈಲು ಹಿಡಿದು ಕುಂತೆನೆಂದರೆ ಮತ್ತೆ ಮಧ್ಯಾಹ್ನ ಸ್ನಾನಕ್ಕೇ ಏಳುವ ಅಭ್ಯಾಸ ಶುರುವಾಗಿತ್ತು. ಯಾಕೋ ತೀರಾ ಅಡಿಕ್ಟ್ ಆಗುತ್ತಿದ್ದೇನೆಂದು ಮೊಬೈಲ್ ಬಿಟ್ಟು, ಅಂಡುಗೊಕ್ಕೆಗೆ ಕತ್ತಿ ಸಿಕ್ಕಿಸಿಕೊಂಡು ಬೆಟ್ಟದ ದಾರಿ ಹಿಡಿದಿದ್ದೆ. ಚೌತಿ ಹಬ್ಬದ ಎದುರು. ಬಿಸಿಲು-ಮಳೆಗಳ ಯುಗಳಗೀತೆಗೆ ನಮ್ಮೂರು ರಂಗಮಂಚವಾಗಿ ಬದಲಾಗಿತ್ತು. ಮೊಣಕಾಲೆತ್ತರ ಬೆಳೆದ ಹುಲ್ಲು ಹಾಸಿನ ನಡುವೆ ತೆವಳಿ ಸಾಗಿದ್ದ ಕಾಲುಹಾದಿಯನ್ನ ಸವೆಸಲು ಕಾಣಿಕೆಯಿಡುತ್ತಿದ್ದೆ. ಬೆಟ್ಟದ ತುದಿಗೆ ಹಬ್ಬಿದ್ದ ಗುರಗೆ ಮಟ್ಟಿ ಬಳಿ ಕಾಡುಹಂದಿ ಓಡಿದಂತಾಯ್ತು. ಹೋದೆ.
ಎದೆಯೆತ್ತರದ ಗುರಗೆ ಮಟ್ಟಿಯೊಳಗೆ ಯಾರೋ ನಡೆದ ಪರಿಣಾಮ ಗುರಗೆ ಎಲೆಗಳ ಅಡಿಯ ಹೊಳಪು ಸೂರ್ಯನಿಗಭಿಮುಖವಾಗಿದ್ದವು. ಯಾರೋ ಕಳ್ಳಬಡ್ಡಿಮಗ ಸೊಪ್ಪು ಕಡಿದು ಹೊತ್ತಿದ್ದಾನೆಂಬ ಗುಮಾನಿಯ ಮೇಲೆ ಮುಂದೆ ಹೋದೆ... ಮಟ್ಟಿಯ ನೆತ್ತಿಯ ಭಾಗ ಮಲಗಿತ್ತು, ಹಾಸಿಗೆ ಹಾಸಿಟ್ಟಂತೆ ಒಪ್ಪವಾಗಿ ಮಲಗಿಸಲಾಗಿತ್ತು! ನನ್ನ ತೋಟಕ್ಕೆ ಬಿಟ್ಟ ಸೊಪ್ಪಿನ ಬೆಟ್ಟ ಯಾರದೋ ಮಧುಶಯ್ಯೆಯಾಗಿತ್ತು!
***
ಕೊಲೆಗಾರನನ್ನು ಹುಡುಕುವುದಾಗಿ ಭರವಸೆ ನೀಡಿ ಮಂಜ್ನಾಥ ಕೆಲದಿನ ಎಲ್ಲಿಂದ ಶುರು ಮಾಡುವುದು ಅಂತಲೇ ತಿಳಿಯದೇ ಸುಮ್ಮನಿದ್ದ. ವಾರಗಟ್ಟಲೆ ತಮ್ಮ ಊರಲ್ಲದೆ ಸುತ್ತಲಿನ ಊರುಗಳಲ್ಲಾದರೂ ಅಂಥ ಕಾಮುಕ ಮಹಾಶಯರು ಇದ್ದಾರೆಯೇ ಎಂದು ಒಬ್ಬನೇ ಕುಂತು ಒಬ್ಬೊಬ್ಬರದೇ ಮುಖ ನೆನಪಿನ ಪ್ರಾಜೆಕ್ಟರಿನಲ್ಲಿ ಬಿಟ್ಟು ಹುಡುಕುತ್ತಿದ್ದ. ಕಳೆದ ಹತ್ತದಿನೈದು ವರ್ಷಗಳಲ್ಲಿ ಕೊಲೆಯಾಗಲಿ, ಅತ್ಯಾಚಾರವಾಗಲೀ ಆ ಭಾಗದಲ್ಲೇ ನಡೆದ ದಾಖಲೆ ಇದ್ದಿರಲಿಲ್ಲ. ಅಂಥ ಮೆರವಣಿಗೆ ಊರಿಗೆ ಇದೆಂಥ ಗ್ರಹಚಾರ ವಕ್ಕರಿಸಿದೆಯೋ ಎಂದು ಕಂಗಾಲಾಗುವಷ್ಟಕ್ಕೆ ಯೋಚನೆ ನಿಲ್ಲುತ್ತಿತ್ತು.
ಅಷ್ಟರಲ್ಲಾಗಲೇ ರೇಣುಕಾಳ ಕೋಪ ವಿಕೋಪಕ್ಕೆ ತಿರುಗಿತ್ತು. ಅಪರಾಽಯನ್ನು ಹುಡುಕುವುದಾಗಿ ಮಾತುಕೊಟ್ಟ ಮಂಜ್ನಾಥನ ತೋಟದಲ್ಲೇ ಬೋರ್ಡು ಬಂದಿತ್ತು. ಅದರಲ್ಲಿನ ಬರಹದ ಪ್ರತಿ ಸಾಲು ಮಂಜ್ನಾಥನನ್ನೇ ಚುಚ್ಚುತ್ತಿತ್ತು. “ಅದ್ರಜ್ಜಿಕುಟಾ“ ಉದ್ಗಾರ ಹೊರಟಿತ್ತು.
ಸೊಪ್ಪಿನ ಬೆಟ್ಟದಲ್ಲಿ ನೀರಿಗೆ ಬಿಟ್ಟಾಗ ರಾಮನ ಹೆಂಡತಿಯೂ, ಅವಳ ವಾರಗಿತ್ತಿಯೂ ಮಾತಾಡಿಕೊಳ್ಳುತ್ತಿದ್ದುದು ನೆನಪಿಗೆ ಬಂದಿದ್ದು ಅಷ್ಟೇ ಆಕಸ್ಮಿಕವಾಗಿ. ನಾಯ್ಕರ ಕೇರಿಯ ಆಶಾಳ ಹೊಟ್ಟೆ ದಪ್ಪಗಾಗಿತ್ತೆಂದೂ, ನ್ವಾಟ ನೋಡುವ ಗಣಪತಿಯ ಮದ್ದಿಗೆ ಗರ್ಭ ಕರಗಿಸಲಾಗಿತ್ತೆಂದೂ ಮಾತುಕತೆ ನಡೆದಿತ್ತು. ನೀರಿಗೆ ಬಿಟ್ಟಾಗ ಹಿಂಗೆ ಗಾಸಿಪ್ಪುಗಳನ್ನು ಮಾತಾಡಿಕೊಳ್ಲುವುದು ಸಾಮಾನ್ಯವಾಗಿತ್ತು. ಶೇರುಗಾರ ರಾಮನೂ ಆಗಾಗ ಸೇರಿಕೊಳ್ಳುತ್ತಿದ್ದ. ಈ ಮಾತುಕತೆಗಳಲ್ಲಿ ಸತ್ಯವೆಂಬುದು ದೂರದ ಮಾತಾಗಿದ್ದರೂ ತಿರಸ್ಕರಿಸಿ ಬದಿಗಿಡುವಷ್ಟು ಸುಳ್ಳೇನಾಗಿರಲಿಲ್ಲ.  ಎಲ್ಲಾ ಸೀಯರಂತೆ ಆಶಾ ಗರ್ಭಿಣಿಯಾಗಿದ್ದು ಸಾಮಾನ್ಯವಾಗಿದ್ದರೂ ಆಕೆಗಿನ್ನೂ ವಿವಾಹವಾಗಿಲ್ಲದಿರುವುದು ವಿಶೇಷಣವಾಗಿತ್ತು!
***
ನನಗೆ ಸೇರಿದ ಸೊಪ್ಪಿನ ಬೆಟ್ಟದಲ್ಲಿ ಯಾರಪ್ಪಾ ಪ್ರಸ್ಥ ಮಾಡಿಕೊಂಡಿದ್ದು ಎಂಬ ಕುತೂಹಲಕ್ಕೆ ಅಲ್ಲೇ ಕೆಳಗೆ ಮನೆ ಕಟ್ಟಿಕೊಂಡಿದ್ದ ಮಾಬ್ಲನ ಮನೆಯವರನ್ನು ವಿಚಾರಿಸಿದರೆ ಗೊತ್ತಾಗಬಹುದು ಎಂದು ಹೋದೆನಾದರೂ ಮನೆಯಲ್ಲಿ ಇನ್ನೂ ಮದುವೆಯಾಗದ ಹುಡುಗಿ ಮಾತ್ರ ಇದ್ದುದನ್ನು ನೋಡಿ ವಾಪಾಸು ಬಂದಿದ್ದೆ. ಅವಳಲ್ಲಿ ವಿಚಾರಿಸುವ ವಿಷಯ ಅದಲ್ಲ ಎಂಬುದೊಂದು ಕಾರಣವಾಗಿದ್ದರೆ, ನಾನು ಅವಳೊಟ್ಟಿಗೆ ಮಾತನಾಡಿದ್ದನ್ನೇನಾದರೂ ಅವಳ ದೊಡ್ಡಮ್ಮನ ಮನೆಯವರು ನೋಡಿದರೆ ಅವಳ ಆಶಾ ಎನ್ನುವ ಹೆಸರಿನೊಟ್ಟಿಗೆ ನನ್ನ ಹೆಸರೂ ಹಾಳಾಗುವುದು ಪಕ್ಕಾ ಎಂಬ ನಂಬಿಕೆ ನನ್ನದಾಗಿತ್ತು.
ಆದರೆ ಇಂಥ ಕ್ರೀಡೆಗಳಿಗೆ ಅಗ್ದಿ ಬೇಗ ಪ್ರಚಾರ ಸಿಗುತ್ತದೆ. ಅದೇ ಬೆಟ್ಟದ ಕೆಳಗಿನ ಮನೆಯ ಆಶಾ ಗರ್ಭ ಧರಿಸಿದ್ದಳೆಂದೂ, ಹೊಟ್ಟೆ ತುಂಬಾ ದೊಡ್ಡದಾಗುವುದರೊಳಗೆ ಗರ್ಭಪಾತ ಮಾಡಿಸಲಾಯಿತೆಂದೂ ಗಾಸಿಪ್ಪು ಹಬ್ಬಿತ್ತು ಆದರೆ ಮಜಾ ನೋಡಿ, ಅವಳ ಅದಕ್ಕೆ ಅದ್ಯಾರೆಂಬುದನ್ನು ಮಾತ್ರ ಯಾರೂ ಪತ್ತೆ ಮಾಡಲಿಲ್ಲ ಹಿಂಗೆ ಸುದ್ದಿ ಹಬ್ಬಿದ ಮೇಲೆ ಗುರಗೆ ಮಟ್ಟಿ ಮಲಗಿದ್ದು ನನಗೂ ಕಾಣದ್ದರಿಂದ ವಿಚಾರ ಮರೆತೇ ಹೋಗಿತ್ತು.
ಆವತ್ತೊಂದಿನ ಮಂಜ್ನಾಥ ಹೊಟೆಲ್ ಒಂದರಲ್ಲಿ ಸಿಕ್ಕಾಗ ಲೋಕಾರೂಢಿ ಮಾತುಗಳ ನಂತರ ಚಾ ಜೊತೆ ಈ ವಿಚಾರವನ್ನೂ  ಹೀರಿದೆವು. ಇಬ್ಬರ ಸಾಮಾನ್ಯ ಕುತೂಹಲ ಆ ಅನಾಮಿಕ ಗಂಡಸು ಯಾರಪ್ಪಾ ಎಂಬುದಾಗಿತ್ತು. ಈ ರಹಸ್ಯದ ಬೆನ್ನು ಹತ್ತಿದರೆ ರೇಣುಕಾಳ ಅಂತ್ಯದ ಬಗ್ಗೆ ಮಾಹಿತಿ ಸಿಗುತ್ತದೆಂಬ ನಂಬಿಕೆ ನಮ್ಮದಾಗಲು ನಿರ್ದಿಷ್ಟ ಕಾರಣ ಇರಲಿಲ್ಲ.
***
ಚುನಾವಣೆ ಹತ್ತಿರ ಬಂದಿದ್ದರಿಂದ ನನ್ನ ಕೆಲಸದ ವೇಳೆ  ನಡುರಾತ್ರಿವರೆಗೆ ಸಾಗುತ್ತಿತ್ತು. ಅದೇ ಚುನಾವಣೆಯ ಕಾರಣ ನಾನು ಯಾವತ್ತೂ ಓಡಾಡುವ ರಸ್ತೆ ರಿಪೇರಿಯ ನೆಪದಲ್ಲಿ ಆವತ್ತಷ್ಟೇ ತುರ್ತಾಗಿ ಬಂದ್ ಆಗಿತ್ತು. ತಥ್‌ತೇರಿಕಿ ಅನ್ನುತ್ತ ಅಡ್ಡ ದಾರಿ ಹಿಡಿದೆ. ಮೆರವಣಿಗೆಯ ಒಕ್ಕಲಿಗರ ಕೇರಿ ಹಾದು ಬೆಟ್ಟವೇರಿ, ಹೊಳೆಯಿಳಿದು ಬ್ರಾಹ್ಮಣರ ಸ್ಮಶಾನ ದಾಟಿದರೆ ನಮ್ಮನೆಯ ಗೇಟಿನ ಲೈಟು ಕಾಣುತ್ತಿತ್ತು.
ಇನ್ನೇನು ಮೆರವಣಿಗೆ ದಾಟಿ ಹೊಳೆ ಹತ್ತಿರ ಬಂದಿದ್ದೆನೋ ಇಲ್ಲವೋ, ಲಾಟೀನ ಬೆಳಕೊಂದು ಓಡಿ ಪಿಳ್ಳೆ ಮಟ್ಟಿಯ ಹಿಂದೆ ಅಡಗಿ ಕುಂತಂತಾಯ್ತು. ಅದೇ ಹೊಳೆಯ ದಂಡೆಯಲ್ಲೇ ರೇಣುಕಾಳ ಹೆಣ ಸಿಕ್ಕಿದ್ದಲ್ಲವೇ? ಎಂಬ ನೆನಪೇ ದೆವ್ವಗಳ ಕಲ್ಪನೆಗೆ, ಹಣೆಯ ಬೆವರಿಗೆ ಕಾರಣವಾಗಿತ್ತು. ನನ್ನಂಥ ನಾನೇ ಹೆದರಿದರೆ ಹೇಗೆ! ಎಂತೆಂಥ ಹೆಣಗಳನ್ನು ನೋಡಿಲ್ಲ! ಧೈರ್ಯ ಮಾಡಿ “ಯಾರ್ರಾ ಅದು?" ಎಂದು ಕೇಳಲೂ, ಸರೀ ಗುರಿಯಿಟ್ಟ ಕಲ್ಲು ಬಂದು ನನ್ನ ಬೈಕಿನ ಹೆಡ್‌ಲೈಟನ್ನು ಒಡೆಯಲೂ ಸರಿಯಾಯ್ತು. 
ನಾನೆಂತ ಕಮ್ಮಿ ಆಸಾಮಿಯೇ? ಮೊಬೈಲ್ ಟಾರ್ಚ್ ಬಿಟ್ಟು ಆ ವ್ಯಕ್ತಿಯ ಹಿಂದೇ ಓಡಿದೆ. ಅರೆ! ಒಂದಲ್ಲ, ಎರಡು ಆಕೃತಿಗಳಿದ್ದವು! ಒಂದು ಆಕೃತಿಯ ಪಕ್ಕಾ ಗುರುತು ಸಿಕ್ಕಿತ್ತು. ಮಾದೇವ! ನೈಟಿಯಂಥ ಬಟ್ಟೆ ತೊಟ್ಟ ವ್ಯಕ್ತಿ ಆಶಾ ಎಂಬುದು ನನ್ನ ಊಹೆಯಾಗಿತ್ತು. ಯಾರೆಂದು ತಿಳಿದ ಮೇಲೆ ಬೆನ್ನಟ್ಟಿ ಆಯಾಸ ಮಾಡಿಕೊಳ್ಳುವುದೇಕೆ? ಬೆಳಿಗ್ಗೆ ನೋಡಿದರಾಯ್ತೆಂದು ವಾಪಾಸು ಬಂದೆ. ಮೊಬೈಲ್ ಬೆಳಕಿನಲ್ಲಿ ಬೈಕ್ ಓಡಿಸುವ ಸ್ಥಿತಿಗೆ ತಂದ -ರೆಸ್ಟ್ ಗಾರ್ಡ್ ಮಾದೇವನ ಮೇಲೆ ಭಯಂಕರ ಕೋಪ ಬಂದಿತ್ತು.
***
ಕುಂಬ್ರಿ ಗುಡ್ಡೆಯ ಮೇಲೆ ನೆಡಲೆಂದು ತಂದಿರಿಸಿದ್ದ ಇನ್ನೂರು ಅಕೇಸಿಯಾ ಸಸಿಗಳನ್ನು ಕದ್ದನೆಂಬ ಆರೋಪ ಹೊತ್ತಿದ್ದ ಬಾಲು ಕಾಣೆಯಾಗಿ ಮೂರು ದಿನಗಳಾಗಿದ್ದವು. ನಾನು ಮಂಜ್ನಾಥನಿಗೆ ಮಾದೇವನ ವಿಷಯ ತಿಳಿಸಲು ಮೆರವಣಿಗೆಗೆ ಹೋಗುವ ಹೊತ್ತಿಗೆ ಬಾಲುವಿನ ದೇಹಕುಂಬ್ರಿ ಗುಡ್ಡೆಯ ಮತ್ತೊಂದು ಬದಿಗೆ ನೇತಾಡುವ ಸ್ಥಿತಿಯಲ್ಲಿ ಸಿಕ್ಕ ಸುದ್ದಿ ಬಂದಿತ್ತು. ಕಳೆದ ಎಂಟು ತಿಂಗಳಲ್ಲಿ ಎರಡನೇ ಕ್ರೈಂ ಸುದ್ದಿಗೆ ಮೆರವಣಿಗೆ ಹೆಸರು ಕೊಟ್ಟಿತ್ತು.
ಮಂಜ್ನಾಥನಿಗೆ ಚಿಂತೆ ಹೆಚ್ಚಾಗಿತ್ತು. ರೇಣುಕಾಳ ಸಾವಿಗೆ ಕಾರಣವಾದವನನ್ನು ಹುಡುಕುತ್ತೇನೆಂದು ಗಂಗಾಳಿಗೆ ಕೊಟ್ಟ ಭರವಸೆ ಇನ್ನೂ ಈಡೇರಿಸಲಿಲ್ಲ. ರೇಣುಕಾಳೆ ಕೊಟ್ಟ ಕಂಪ್ಲೇಂಟಿನಂತೆ ಅಕೇಸಿಯಾ ಸಸಿಗಳ ಕಳ್ಳತನದ ಆರೋಪ ಹೊತ್ತಿದ್ದ ಬಾಲು ಕೂಡ ಸತ್ತಿದ್ದಾನೆ. ಮುಂದೇನು?
***
ಅಂತೂ ಮಾದೇವ ಸಿಕ್ಕಿದ್ದ! ಮೊದಲಿಗೆ ತಾನು ಸರ್ಕಾರಿ ನೌಕರ, ಕೈ ಮಾಡಿದರೆ ಜೈಲಿಗೆ ಹಾಕ್ತಾರೆ ಎಂದು ಹೆದರಿಸಿದರೂ, ಮಂಜ್ನಾಥನ ಬರೋಬ್ಬರಿ ತೂಕದ ಕೈ ಎರಡುಸಲ ಮಾದೇವನ ಕೆನ್ನೆಗೆ ಬಿದ್ದದ್ದೇ ಎಲ್ಲ ಬಾಯ್ಬಿಟ್ಟ.
ಆವತ್ತು, ಸಂಜೆ ಏಳರ ಹೊತ್ತಿಗೆ ತನ್ನ ಸುಪರ್ದಿಗೆ ಬರುವ ಅರಣ್ಯವನ್ನೆಲ್ಲ ಸುತ್ತಾಡಿ ಬರುವಾಗ ಮುಳ್ಳಂದಿಯ ಮುಳ್ಳನ್ನು ಹೊಕ್ಕಿಸಿಕೊಂಡು ಓಡುತ್ತಿದ್ದ ರೇಣುಕಾ ಕಂಡಿದ್ದಳು. ಬಿಕ್ಕೆ ಗುಡ್ಡೆಯ ವಾರೆಯ ಮೇಲೆ ಓಡಲಾಗದೆ ಬಿದ್ದಾಗ ಮೇಲೆ ಸರಿದ ಲಂಗ ಮಾದೇವನನ್ನು ಕರೆದಂತೆ ಆಗಿತ್ತಂತೆ! ಇಷ್ಟು ಹೇಳುವುದರೊಳಗೆ ರಪನೆ ಬಿದ್ದಿತ್ತು ಮಂಜ್ನಾಥನ ಹೊಡೆತ
ತಾನು ಅವಳನ್ನು ಸಾಯಿಸಲಿಲ್ಲವೆಂದೂ, ಇದನ್ನು ಊರವರಿಗೆ ಹೇಳಿದರೆ ಸಾಯಿಸುತ್ತಾರೆಂದೂ ಗೋಗರೆದ. ಆಶಾಳನ್ನು ತಾನು ಪ್ರೀತಿಸುತ್ತಿದ್ದೇನೆಂದೂ, ಮದುವೆಯನ್ನೂ ಆಗುತ್ತೇನೆಂದು ಅಳಲು ಶುರು ಹಚ್ಚಿದ.
ಯಾರಿಗೆ ಹೇಳದಿದ್ದರೂ ರೇಣುಕಾಳ ತಾಯಿಗೆ ಹೇಳುವುದು ಕರ್ತವ್ಯವೆಂದೇ ಭಾವಿಸಿದ್ದ ಮಂಜ್ನಾಥ ಕೊನೆಗೂ ರೇಣುಕಾಳ ಸಾವಿಗೆ ಕಾರಣವಾದವನನ್ನು ಹಿಡಿದ ಸಂತೃಪ್ತಿಯಿತ್ತು ಮಂಜ್ನಾಥನಲ್ಲಿ.
***
“ಮಾದೇವ ಅಲ್ಲ ಸಾಯಿಸಿದ್ದು" ಅನಿರೀಕ್ಷಿತ ಉತ್ತರ ಬಂದಿತ್ತು ಗಂಗಾಳಿಂದ. ಅವಳ ದೃಷ್ಟಿ ಈಗಲೂ ಮಂಜ್ನಾಥನನ್ನು ಇರಿಯುತ್ತಿದ್ದವು.
“ಮತ್ತೆ?" ಅನಿರೀಕ್ಷಿತ ಮಾತಿಗೆ ಮಂಜ್ನಾಥನೂ ಚಕಿತನಾಗಿದ್ದ. ಮಾದೇವನ ತಪ್ಪೊಪ್ಪಿಗೆಗೆ ನಾನು ಸಾಕ್ಷಿಯಾಗಿ ಗಂಗಾಳ ಮುಂದಿದ್ದೆ. ನನಗಂತೂ ಇವರ ಮಾತುಕತೆ ಅರ್ಥವಾಗುತ್ತಿರಲಿಲ್ಲ.
“ಇದು ಬಾಲುವಿನ ಆತ್ಮಹತ್ಯೆ ಪತ್ರ" ಎಂದು ಒಂದು ಪತ್ರವನ್ನು ಮಂಜ್ನಾಥನ ಕೈಗಿತ್ತಳು ಗಂಗಾ
“ರಕ್ತದ ಮಡುವಿನಲ್ಲಿ ಉರುಳಾಡುತ್ತಿದ್ದ ಆ ದೇಹವನ್ನು ನೋಡಿಯೂ ಕರುಣೆ ಮೂಡದೆ ಬಂದೆನಲ್ಲ, ನಾನೂ ಮನುಷ್ಯನಿರಬಹುದೆ? ದಿನಾ ಮಲಗುವಾಗ ರೇಣುಕಾಳ ರಕ್ತಸಿಕ್ತ ದೇಹ ಕಣ್ಣೆದುರು ಬರುತ್ತದೆ ಬದುಕಲು ನಾನಂತೂ ಅರ್ಹನಲ್ಲ" ಎಂದು ಓದಿಕೊಳ್ಳುತ್ತಿತ್ತು ಆ ಪತ್ರ.
ಮಾದೇವ ನಕ್ಕಿದ್ದ! “ಗಂಗಾ, ಪ್ಯಾಟೆಗೆ ಹೋಗ್ಬೇಕು ಅಂದಿದ್ಯಲೆ. ಬರೂದಾರೆ ನಮ್ ಜೀಪೈತಿ" ಎಂದ.
ಸುಮ್ಮನೆ ಅವನ ಹಿಂದೆ ಹೊರಟಿದ್ದಳು ಗಂಗಾ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ