ಆತ್ಮಗಮನೆ

         ಕುಮಟಾ, ಅಂಥಾ ದೂರದೂರೇನಲ್ಲ ನನ್ನೂರಿಂದ. ಅಂಥಾ ಪ್ರೇಕ್ಷಣೀಯ ಪಟ್ಟಣವಾಗ್ಲೀ, ಆಕರ್ಷಕ ನಗರವಾಗ್ಲೀ ಅಲ್ಲ. ಆದರೆ, ನಂಗೊಂಥರಾ ಸೆಳೆತ ಆ ಊರೆಂದರೆ‌. ಪ್ರತೀಬಾರಿ ಹೋದಾಗಲೂ ಒಂಥರಾ ರಿಪ್ರೆಷ್ಷಾಗಿ ಬರ್ತೀನಿ, ಇಲ್ಲೆಲ್ಲೋ ಕಳೆದು ಹೋದ ನಾನು ಅಲ್ಲೆಲ್ಲಿಂದಲೋ ಪತ್ತೆಯಾಗುವ ಕ್ರಿಯೆಯೇ ಕುಮಟಾ ಆಗಿರ್ಬೋದು.
        ಸಖತ್ತ್ ಬೋರಿಂಗ್ ಲೀಡ್ ಅಲ್ವಾ? ಇರ್ಲಿ ಬಿಡಿ‌. ನಂಗೆ ಕುಮಟಾ ಪೇಟೆಗಿಂತಾ ಶಿರಸಿಯಿಂದ ಕುಮಟಾವನ್ನ ಸೇರಿಸೋ ರಸ್ತೆ, ಆ ಪಯಣವೇ ಇಷ್ಟ‌.‌‌‌‌ ಹಿಂಗಂದ್ರೆ ಹಿಂಗೇ ನಿಶ್ಚಲ ನಾನು ಚಲಿಸೋಕೆ ಶುರು ಮಾಡ್ತೀನಿ. ಅಮ್ಮೀನಳ್ಳಿ ಗೊತ್ತಾ ನಿಮಗೆ? ಅಲ್ಲೇ, ಚೂರು ಒಳಗಡೆ ನನ್ನ ಅಮ್ಮನ ತವರೂರಿದೆ. ಇತ್ತು, ನನ್ನ ಸೋದರಮಾವಂದಿರೆಲ್ಲಾ ಹಿಸೆಯಾಗಿ ಪಟ್ಟಣ ಸೇರುವುದರೊಂದಿಗೆ ಇಲ್ಲವಾಯ್ತು‌. ಅಜ್ಜಿಯ ಮೊದಲ ತಿಥಿಯೇ ಅಲ್ಲಿಗೆ ನನ್ನ ಕೊನೇ ಭೇಟಿಯಾಗಿತ್ತು, ಏಳೆಂಟು ವರ್ಷಗಳ ಹಿಂದಿನ ಮಾತದು ಈಗ್ಯಾಕೆ ಬಿಡಿ. ಹಾ, ಕುಮಟಾ ರಸ್ತೆ ಇಷ್ಟವಾಗೋದು ಇಂಥದೇ ಮರೆತು ಹೋದ ನನ್ನವರ ನೆನಪಿಂದ‌. ಮೊದಲ ಹುಡುಗಿಯ ತವರೂ ಆ ಕಡೆಗೇ ಅನ್ನೋದು ನೆನಪಾದರೂ ಮರೆಯಬಲ್ಲ ವಿಷಯ.
          ಆಗೆಲ್ಲಾ ನಾನು ಬಿ.ಕಾಂ‌. ಓದುತ್ತಿದ್ದ ಸಮಯ. ವೆಂಕ,ನಂದು, ರವಿ ಮತ್ತೆ ನಾನು ಮೂಡು ಬಂತೆಂದ್ರೆ ಹಂಗೇ ಗಾಡಿ ಹತ್ತಿ ಉಂಚಳ್ಳಿ ಫಾಲ್ಸಿಗೋ, ಬೆಣ್ಣೆ ಫಾಲ್ಸಿಗೋ ಹೋಗುತ್ತಿದ್ದದುಂಟು. ಈಗ ಅವ್ರೆಲ್ಲಾ ಎಲ್ಲಿ? ನಾನೇಕೆ ಇನ್ನೂ ಇಲ್ಲೇ ಇದೀನಿ? ಹಿಂಗೆಲ್ಲಾ ಅಸಂಬದ್ಧ ಪ್ರಶ್ನೆಗಳು ಒಂದಿಷ್ಟು ನನ್ನ ತಪ್ಪುಗಳ ನೆನಪನ್ನೂ ಮತ್ತೊಂದಿಷ್ಟು ಖಾಸಾ ಖುಷಿಗಳನ್ನೂ ಹೊತ್ತು ತರೋದುಂಟು. ಹಿಂಗೇ ಹಾದಿ ಕುಮಟಾ ಕಡೆ ಹೋಗ್ತಿದ್ರೆ ನಾನು ಅಲ್ಲೆಲ್ಲೋ ದೂರದಲ್ಲಿ ಸುತ್ತುತ್ತಿರ್ತೀನಿ. ಹಿಂಗೇ.
         ಮೊನ್ನೆ ಚೇತು ಜೊತೆ ಬೆಣ್ಣೆ ಫಾಲ್ಸಿಗೆ ಹೋಗಿದ್ದೆ, ಫಾಲ್ಸಿನ ಜಲರೂಪಿ ಮಾಂಸಗಳೆಲ್ಲ ಕರಗಿ ಹೆಬ್ಬಂಡೆಗಳ ಅಸ್ಥಿಪಂಜರಗಳಷ್ಟೇ ಉಳಿದಿದ್ವು. ಆದ್ರೆ ರಸ್ತೆ ಮಾತ್ರ ಯಾವತ್ತಿನಂತೆ ಕಾಡಿನ ಅಪ್ಪುಗೆಯ ಕಾವಲಿನಲ್ಲಿರೋ ವರ್ಜಿನಿಟಿಯನ್ನ ಉಳಿಸಿಕೊಂಡಿವೆ. ಮತ್ತೆ ಹೋಗಬೇಕು, ಅದೇ ಹಳೆ ಗೆಳೆಯರೊಂದಿಗೆ ಅಂತನ್ನಿಸಿದ್ರೂ ಊಹ್ಞೂಂ ಆಗಲ್ಲ ಬಿಡಿ.
        ಈ ಮಂಜುಗುಣಿ ಕ್ರಾಸ್ ಇದೆಯಲ್ಲಾ, ಅಲ್ಲಿಂದ ನಮ್ಮನೆ ಬರೀ ಹತ್ತೂ ಚಿಲ್ಲರೆ ಮೈಲಿಗಳ ದೂರ. ಆದ್ರೂ ಮೂವತ್ತು ಮೈಲಿಗಳ ಸುತ್ತು ಹಾದಿಯಲ್ಲಿ ಶಿರಸಿ ಸುತ್ತಿ ಬರಬೇಕು, ಎಂಥಾ ಮಜ ಅಲ್ವಾ! ನನ್ನಜ್ಜ ಹಂಗೇ ಅವನದೇ ಆವಿಷ್ಕಾರದ ಹಾದಿಯಲ್ಲಿ ಹೆಬ್ರಿ ತನಕ ನಡೆದು ಹೋಗ್ತಿದ್ನಂತೆ! ಈಗೇ ಕಾಡು ಅನ್ನೋ ಮಟ್ಟಿಗಿನ ಕಾಡು ಅದು, ಆವಾಗ ಹೆಂಗಿದ್ದಿರ್ಬೇಡ!
        ಅಜ್ಜ, ಅದೇ ನೀಲಿ ಕಣ್ಣುಗಳ ಸುಂದರಾಂಗ. ಅದೆಷ್ಟು ಹೆಣ್ಣುಗಳ ಸಾಂಗತ್ಯ ಇತ್ತೋ ಅವಂಗೆ, ಅವನ ಕಥೆಗಳವೆಷ್ಟೋ! ಅಸಮಾನ್ಯ ಜಮೀನುದಾರನಾಗಿದ್ದ ನನ್ನಜ್ಜನ ಅಪ್ಪ ಆಗಿನ ಕಾಲದಲ್ಲಿ ಹೆಂಗೆ ಸತ್ತನೋ, ಮುತ್ತಜ್ಜಿಗೆ ಅದೇನಾಗಿತ್ತೋ, ಇಂಥಾ ಸುಂದರಾಂಗನನ್ನು ಬಿಟ್ಟು ಅದೆಂಗೆ ಸತ್ರೋ. ಆರೈಕೆ ಮಾಡುವವರಿದ್ದಿದ್ದರೆ ಅಜ್ಜ ಹಂಗೆ ಕುಡುಕನಾಗ್ತಿರ್ಲಿಲ್ಲ, ಅದ್ಯಾವುದೋ ಕಲ್ಲೂರಮ್ಮ‌ ಮಾಡಿಕೊಡುತ್ತಿದ್ದ ಬಾಳೆಹಣ್ಣಿನ ದೊಡ್ಣಕ್ಕೆ ಆಸ್ತಿಯನ್ನೇ ಕೊಡ್ತಿರ್ಲಿಲ್ಲ, ಜೂಜುಕೋರನಾಗ್ತಿರ್ಲಿಲ್ಲ. ಅಜ್ಹನಿಗೆ ಬೈಯುವ ಅಪ್ಪನಿಗೆ ಅಜ್ಜ ಜಾಸ್ತಿ ಆಸ್ತಿ ಉಳಿಸಿಲ್ಲವೆಂಬ ಕೋಪವೋ, ಅಜ್ಜಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅನ್ನೋ ಸಿಟ್ಟೋ ಅಥವಾ ತಮ್ಮ ಬಾಲ್ಯವನ್ನು ಕಸಿದುಕೊಂಡನಲ್ಲಾ ಅನ್ನೋ ಬೇಸರವೋ ಇದ್ದಿರಬಹುದು. ಆದ್ರೆ ಅಜ್ಜನದೇನು ತಪ್ಪಿತ್ತು? ಅಂದ್ರೆ ಅಪ್ಪ ತಪ್ಪಾ!? ಇಲ್ಲಿ ಎಲ್ಲರೂ ಸರಿ, ಎಲ್ಲರೂ ತಪ್ಪು. ನಾನೂ.
         ಹಾ, ಇದೇ ಹೆಬ್ರಿಯ ಆ ಇಳಿಜಾರಲ್ಲೆಲ್ಲೋ ಅಜ್ಜನ ಅವಳಿದ್ದಿರಬಹುದು‌. ಈಗಲೂ ಇರಬಹುದಾ? ಊಹ್ಞೂಂ, ಇರಲಿಕ್ಕಿಲ್ಲ. ಅಂಥಾ ದಿಲ್ದಾರ್ ಅಜ್ಜ ಅವನ ಅವಳಿಗೆ ಇಲ್ಲಿ ಜಮೀನು ಕೊಡಿಸಿದ್ದನಂತೆ! ಮಕ್ಕಳಾಗಲಿಲ್ಲ, ಇಲ್ಲಿ ಏಳೆಂಟು ಫಸಲು ಬೆಳೆದ ಅವನಿಗೆ ಆ ಜಮೀನಲ್ಲಿ ಬೆಳೆ ಬೆಳೆಯಲಾಗಲಿಲ್ಲ ಅಂದ್ರೆ ನಂಗಂತೂ ಆಶ್ಚರ್ಯ. ಬಹುಶಃ ಈಗಿನ ಸಿನಿಮಾಗಳಲ್ಲಿ, ಕಾದಂಬರಿಗಳಲ್ಲಿ ಹೇಳೋ ಡಿವೈನ್ ಲವ್, ದೈವಿಕ ಪ್ರೀತಿ ಅದಾಗಿದ್ದಿರಬಹುದಾ? ಅಜ್ಜನಂತಾ ಲಂಪಟನಿಗೆ ಅಂಥದೊಂದು ಭಾವನೆಯೂ ಇರಲಿಕ್ಕಿಲ್ಲ.
        ರಾಗಿಹೊಸಳ್ಳಿಯ ಅದ್ಯಾವುದೋ ಹೆಣ್ಣನ್ನು ತಂದಿದ್ದನಂತೆ, ತೀರಾ ಅರವತ್ತಾದ ಮೇಲೆ. ಅಪ್ಪನಿಗೆ, ಕಾಕನಿಗೆ ಅದಾಗಲೇ ಮೀಸೆ ಚಿಗುರಿತ್ತು, ಅಜ್ಜಿ ಮಕ್ಕಳಲ್ಲಿ ತನ್ನ ಭವಿಷ್ಯದ ಕಾವಲನ್ನು ಕಟ್ಟಿಕೊಂಡಿದ್ದಳು. ಬಿಟ್ಟಾರಾ? ಹಳೆಮನೆಯ ಅಟ್ಟದ ಕಂಬಕ್ಕೆ ಕಟ್ಟಿ ಭಾರಿಸಿದ್ದರಂತೆ‌. ಸ್ವಂತ ಮಕ್ಕಳೇ ನಿರ್ಲಕ್ಷಿಸಿದರೂ, ಹೀಯಾಳಿಸಿದರೂ, ಬೈದರೂ ಕೊನೆಗೆ ಹೊಡೆದರೂ ತೊಂಬತ್ತೈದು ವರ್ಷ ಅದೇ ಸಂಸಾರದಲ್ಲಿ ಬದುಕಿದ ಅಜ್ಜನಿಗೆ ಸ್ವಾಭಿಮಾನ ಇರಲಿಲ್ವಾ? ಅದೆಂಥ ಬದುಕು ಆತನದು, ಛೀ. ನಾನು? ನಾನೇನು ಕಡಿದು ಗುಡ್ಡೆ ಹಾಕಿರೋನ ಥರ ಅಜ್ಜನನ್ನ ವಿಮರ್ಷಿಸೋದು? ಅಜ್ಜನಿಗಿಂತ ನಾನೇನು ಭಿನ್ನ!
         ಆಹಾ, ಕುಮಟಾ ಫೂಲು! ನಾವೆಲ್ಲಾ ಸಮುದ್ರ ನೋಡಬೇಕೆಂದು ಹಠ ಹಿಡಿದಾಗ ಅಜ್ಜಿ ಇದೇ ನದಿಯನ್ನ ತೋರಿಸಿಯೇ ಸಮುದ್ರ ಅನ್ನುತ್ತಿದ್ಳಲ್ಲಾ. ಘಟ್ಟದ ಕೆಳಗಿನ ಅಜ್ಜಿಗೆ ಈ ಘಟ್ಟದ ಮೇಲಿನ ಅಜ್ಜ ಹೆಂಗೆ ಜೋಡಿಯಾದ? ಅಜ್ಜಿಯೊಬ್ಬಳು ಗಟ್ಟಿಯಿರದಿದ್ದರೆ ಇಷ್ಟೊತ್ತಿಗೆ ಇಷ್ಟು ಜಮೀನಿರಲಿ, ಮನೆಯೂ ಇರ್ತಿರ್ಲಿಲ್ವೇನೋ. ಸಾಧ್ವಿ, ಅಜ್ಜನಷ್ಟು ರೂಪಿನವಳಲ್ಲದಿದ್ರೂ ಅಜ್ಜನ ಚಟಗಳನ್ನೆಲ್ಲಾ ಬದಿಗೊತ್ತಿ ಎಂಟು ಮಕ್ಕಳನ್ನು ಬೆಳೆಸಿದ ಗಟ್ಟಿಗಿತ್ತಿ. ಎಂಟೋ ಒಂಬತ್ತೋ? ಹುಚ್ಚ ಗಜಾನನ ಅನ್ನೋ ಚಿಕ್ಕಪ್ಪ ಅದೆಷ್ಟು ಕಷ್ಟ ಕೊಟ್ಟಿದ್ನೋ ಪಾಪ. ಬಟ್ಟೆಯಿಲ್ಲದೇ ಓಡಿಹೋದನಂತೆ‌. ಎಷ್ಟೋ ವರ್ಷಗಳ ನಂತರ ಬಟ್ಟೆ ಇಲ್ಲದೇ ತಿರುಗುತ್ತಿದ್ದ ಹುಚ್ಚನೊಬ್ಬ ಕಂಡಾಗ ಸುಂದ್ರಮ್ಮನ ಮಗ ಅಂತಿದ್ರಂತೆ ಊರವರು. ಅದೆಲ್ಲಾ ಎಷ್ಟು ನಿಜವೋ ಯಾರಿಗ್ಗೊತ್ತು! ಈಗ ಲೆಕ್ಕಕ್ಕೆ ಸಿಗೋರು ಐದು ಮಂದಿಯಷ್ಟೇ.
      ಅಜ್ಜಿಗೊಬ್ಬಳು ಮಗಳಿದ್ದಳಂತೆ, ನನ್ನ ಚಿಕ್ಕತ್ತೆ. ಆಗಿನ ‌ಕಾಲಕ್ಕೇ ಹೈಸ್ಕೂಲು ಕಲೀತಿದ್ದೋಳು, ಲಕ್ಷಣವಂತೆ, ಬುದ್ದಿವಂತೆ ಶರಾವತಿಯ ದಾಹಕ್ಕೆ ಬಲಿಯಾದಳು ಅಂದಾಗ ಅಜ್ಜಿ ಹೆಂಗೆ ತಡೆದುಕೊಂಡಳೋ! ಅವಳ ಹೃದಯವಾದರೂ ಎಂಥದ್ದಾಗಿರಬೇಡ, ಕಚ್ಚೆ ನೆಟ್ಟಗಿಲ್ಲದ ಗಂಡ, ತಲೆ ನೆಟ್ಟಗಿಲ್ಲದ ಮಗ, ಸತ್ತ ಮಗಳು. ಘಟ್ಟದ ಕೆಳಗಿನ ಹುಣ್ಣು ಎಷ್ಟಂದ್ರೂ.
        ನಾನು ಹೊರಟಿದ್ದು, ಹೊರಡೋದು ಕುಮಟಾಕ್ಕೇ. ಅಲ್ಲೆಲ್ಲೋ ಅವಲೋಕನಗಳು ಶುರುವಾಗಿ ಪಟ್ಟಣದ ಹಾರನ್ನುಗಳು, ಕಂಡಕ್ಟರನ ವಿಷಲ್ಲುಗಳು ಎಚ್ಚರಿಸುವ ಹೊತ್ತಿಗೆ ಅದೆಂಥದೋ ಹುರುಪು ಬಂದಿರತ್ತೆ. ಅದೆಂಥದೋ ಹೊಸತನ, ಪ್ರೆಶ್ನೆಸ್. ನನ್ನ ಪ್ರತೀ ಹುಟ್ಟಿದಹಬ್ಬ ಇದೇ ಕುಮಟಾದ ನೆಟ್ವರ್ಕುಗಳಿರದ ಒಂದು ಮೂಲೆಯಲ್ಲಿರತ್ತೆ. ಪ್ರತೀ ಪಯಣವೂ ಹೊಸ ಯೋಚನೆಗಳನ್ನ ಹುಟ್ಟುಹಾಕತ್ತೆ‌. ಅದೇ ಮುಂದಿನ ಯೋಚನೆಗಳಿಲ್ಲದೇ ಬದುಕೋ ಶರತ್ ಹೆಗಡೆ ಗಟ್ಟಿಯಾಗೋದು ಇದೇ ಊರಲ್ಲಿ‌. ನಿನ್ನೆ ಹೋದವ ಇವತ್ತು ಬಂದೆ, ಮತ್ತೊಂದಿಷ್ಟು ಕಲ್ಪನಾತೀತ ಬದುಕಿಗೆ ತಯಾರಾಗಿದ್ದೇನೆ. ಶಿರಸಿಗೆ ಬಂದವನೇ ಇಷ್ಟು ದಿನ ನನಗಿಷ್ಟವಿಲ್ಲ ಎಂದು ದೂಡಿದ್ದ ಕೆಲಸಕ್ಕೆ ಒಪ್ಪಿದ್ದೇನೆ‌. ಜೈ, ನಾನಿರೋದೇ ಹಿಂಗೆ‌.

Comments

Unknown said…
Sundara niroopane. Odisikondu hoyitu.
Unknown said…
Sundara niroopane. Odisikondu hoyitu.

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ