ನರ್ಸಜ್ಜನ 'ಖತ್ರಿ'

                          

        ನಾನು ದಿನಾ ಬಸ್ಸಲ್ಲಿ ಹೋಗ್ಬೇಕಾದ್ರೆ, ರುದ್ರಮೂಲೆಯನ್ನೋ ಆ ಊರ ಒಂಟಿಮನೆ,ಮನೆಯ ಮುಂದಿನ ಅಂಗಡಿ, ಅಂಗಡಿಯ ಮುಂದೆ ಬಸ್ಸನ್ನು ನೋಡ್ತಾ ನಿಂತ್ಕೊಳ್ಳೋ ಆ ಅಜ್ಜ ತುಂಬಾನೇ ಕುತೂಹಲ ಹುಟ್ಟಿಸೋ ಆಕೃತಿಗಳಾಗಿದ್ವು. ಊರು ಬಿಟ್ಟು ಬಂದ್ಮೇಲೆ ಆ ದಾರಿಯಲ್ಲಿ ಹೋಗಿದ್ದೇ ಕಡಿಮೆಯಾಗಿ ಅವೆಲ್ಲಾ ಮೆದುಳಿನ ಸುರುಳಿಗಳ ಮಧ್ಯೆ ಅಜೀರ್ಣವಾಗಿ ನೆನಪಾಗದಂತೇ ಉಳಿದುಬಿಟ್ಟಿದ್ವು. ಅದ್ಯಾವತ್ತೋ ಯಾರದೋ ಬಾಯಿಯಲ್ಲಿ ಆ 'ಖತ್ರಿ ಅಂಗಡಿ'ಯ ಕಥೆಯಂತಾ ಸುದ್ದಿ ಕೇಳೋವರೆಗೂ.
      ನರ್ಸಜ್ಜ,ಅಂಥದ್ದೇ ಎಂಥದೋ ಹೆಸರು ಆ ಅಜ್ಜಂದು ಸರಿಯಾಗಿ ಜ್ಞಾಪಕವಿಲ್ಲ. ಯಾರೂ ಸುಳಿಯದ ಆ ಮೂಲೆಯಲ್ಲಿ ಅದೇಕೆ ಅಂಗಡಿಯಿಟ್ಟಿದ್ನೋ, ಅದೊಂದು ನಿಗೂಢವೇ ಸೈ. ಆಗ್ಲೇ ಎಪ್ಪತ್ತರ ಹತ್ತಿರದ ಪ್ರಾಯ. ಅಂಗಡಿಯ ಖಾಲಿಯಾಗದ ಸಾಮಾನುಗಳ ಅವಧಿ ಮುಗಿದ ನಂತರ ಅಂಗಡಿಯನ್ನ ಅದೆಂಗೆ ತುಂಬಿಡ್ತಿದ್ನೋ, ಅದು ಮತ್ತೊಂದು ನಿಗೂಢ. ಆತ ಬಸ್ಸಿಗೆ ಬಂದದ್ದಂತೂ ನಾನು ನೋಡಿಲ್ಲ. ಅಂತಾ ನರ್ಸಜ್ಜನ ಖತ್ರಿ ಅಂಗಡಿಯು ಈಗಲೂ ಇದೆ. ಗೋಡೆಯಿದೆ,ಬಾಗಿಲಿಲ್ಲ. ರೀಪು-ಪಕಾಸುಗಳ ಒಪ್ಪವಾದ ಅಲಂಕಾರವಿದೆ, ಛಾವಣಿಯಿಲ್ಲ. ಆ ಅಜ್ಜ?

       ಎರಡು ವರ್ಷಗಳ ಹಿಂದಂತೆ,

            ಯಾವತ್ತೂ ಜಲಜಾಕ್ಷಿಯಂಥದೊಂದು ಹೆಸರಿರಬಹುದಾದ, ನರ್ಸಜ್ಜನೆಂಬ ಅಜ್ಜ ಅಂಗಡಿಕಾರನ ಹೆಂಡತಿ ಕೊಟ್ಟಿಗೆ ಕೆಲಸವನ್ನೆಲ್ಲಾ ಮಾಡಿ ಚಾ ಮಾಡಿ ಗಂಡನಿಗೆ ಕೊಟ್ಟದ್ದರಿಂದ ಶುರುವಾಗಿತ್ತಿತ್ತು ನರ್ಸಜ್ಜನ ದಿನಚರಿ. ಯಾರೂ ವ್ಯವಹಾರ ಮಾಡದ ಅಂಗಡಿಯ ಎದುರಿಗಿನ ಕಟ್ಟೆಯ ಮೇಲೆ ಕುಳಿತು ಹಂದಾಡದ ರಸ್ತೆ ಮತ್ತು ನಿಲ್ಲದ ವಾಹನಗಳನ್ನ ನೋಡುತ್ತಾ ಕುಳಿತಿರುತ್ತಿದ್ದ ನರ್ಸಜ್ಜ,ಯಾವತ್ತಿನಂತೇ. ಅಂಗಡಿಯ ಅಂಗಳವನ್ನ ವಾರೆಯಾಗಿ ಬೀಳೋ ಮಳೆಹನಿಗಳಿಂದ ಕಾಪಾಡಬಹುದೇನೋ ಎಂದು ಕಟ್ಟಿದ್ದ ಜೆಡಿ ತಟ್ಟಿಯ ಆಧಾರಸ್ಥಂಬದ ಬುಡ ಕೆಂಪಾಗಿದ್ದು ನೋಡಿಯೇ ನರ್ಸಜ್ಜನ ಕವಳದ ಮಿತಿ ತಾಸಿಗೆ ಎರಡು ಎಂದು ಲೆಕ್ಕ  ಕೊಡಬಹುದಿತ್ತು. ಅಪರೂಪಕ್ಕೊಬ್ಬಿಬ್ಬರು, ನರ್ಸಜ್ಜನ ಮನೆ ಹಿಂಬದಿಯ ಬೆಟ್ಟಕ್ಕೆ ಸೊಪ್ಪು ಕಡೆಯಲೆಂದೋ, ಅಲ್ಲೆಲ್ಲೋ ಇದೆಯೆಂದು ಸುದ್ದಿಯಾದ ಹೆಜ್ಜೇನು ತೆಗೆಯಲೆಂದೋ ಇವರ ಮನೆಯ ಹಾದು ಹೋಗುತ್ತಿದ್ದದುಂಟು. ಹಾಗೆ ಬಂದ ಊರ ಬದಿಯವರೆಲ್ಲಾ ನರ್ಸಜ್ಜನ ಹದಮಾಡಿಟ್ಟ ತಂಬಾಕು ಸವಿಯಲು ಇವರ ಮನೆ ಜಗುಲಿಯಲ್ಲಿ ಕುಳಿತು ಕವಳ ಹಾಕಿ ಕಥೆ ಕೊಚ್ಚುವುದೇ ನರ್ಸಜ್ಜ ಮತ್ತೆ ಜಲಜಜ್ಜಿಯರ ಪಾಲಿನ ಮನೋರಂಜನೆ. ಸಂಜೆ ಸೂರ್ಯ ಕೋಪ ಕಮ್ಮಿ ಮಾಡಿಕೊಂಡು ತಂಪಾಗುತ್ತಿದ್ದಂತೇ ಸಾರಾವಳಿ ಸುರತಿ ಎಮ್ಮೆಗೆ ದಾಣಿಯಿಟ್ಟು ಹಾಲು ಕರೆಯುವ ಸಂಭ್ರಮ. ಅಂದಂಗೇ, ಒಮ್ಮೊಮ್ಮೆ ಮಜ್ಜಿಗೆಗೆಂದು ಕೆಲಸ ಬಿಟ್ಟುಬಂದ ಕುಮ್ರಿ ಮರಾಠಿ ಹೆಂಗಸರೂ ಬರ್ತಿದ್ರು, ಆದರೆ ಅವರ ಮಾತೇನಿದ್ದರೂ ಜಲಜಕ್ಕನ ಜೊತೆಗೆ. ಸಂಜೆ ಬೇಗನೆ ಮಲಗುತ್ತಿದ್ದರಾದ್ರೂ ನಿದ್ರೆ ಬಂತೆಂದಲ್ಲ, ಸೊಂಟ ಹಿಡಿದಿದೆಯೆಂದೋ, ಮಂಡಿನೋವೆಂದೋ ಒಂದು ಕಾರಣಗಳಿಟ್ಟುಕೊಂಡು ಮಲಗಿ, ದಿನವಿಡೀ ಕೇಳಿದ ಸುದ್ದಿಗಳ ವಿಮರ್ಷೆ ಮಾಡುವಷ್ಟರಲ್ಲಿ ನಿದ್ದೆ ಕಣ್ಣೆದುರು ಹಂದಾಡುತ್ತಿತ್ತು.
          ಆವತ್ತು ಹೆಂಡತಿ ರಜೆಯಾದದ್ದರಿಂದಲೋ ಏನೋ,ಮರಾಠಿ ಪದ್ಮಳ ಬದಲು ಅವಳ ಗಂಡ ರುಕ್ಯಾ ನರ್ಸಜ್ಜನ ಮನೆಯ ಮಜ್ಜಿಗೆಗಾಗಿ ಬಂದಿದ್ದ. ಇಬ್ಬರಿಗೂ ಹೊತ್ತು ಹೋಗದೇ ಒಂದಿಷ್ಟು ಕಥೆಕೊಚ್ಚಿ,ಕವಳಗಳನ್ನು ಬದಲಾಯಿಸಿ-ಖಾಲಿ ಮಾಡಿ ಮುಗಿಸುವ ಹೊತ್ತಿಗೆ ಜಲಜಾಕ್ಷಮ್ಮ ಮಜ್ಜಿಗೆ ತಂದಿಟ್ಟಳು. ಅದೇ ಹೊತ್ತಿಗೆ ಹೊರಗೆ ಅದ್ಯಾವುದೋ ಕಾರು ಬಂದು ನಿಂತಿತ್ತು.
         ಹಂಗೆಲ್ಲಾ ಬೆಳಿಗ್ಗೆ ಅನ್ನೋ ಹೆಸರಿನ ಸಮಯ ಸಾಯುವ,ಮದ್ಯಾಹ್ನವೆಂಬ ಹೆಸರಿನ ಹೊತ್ತು ಹುಟ್ಟುವ ಹೊತ್ತಿಗೆಲ್ಲಾ ನರ್ಸಜ್ಜನ ಅಂಗಡಿಯೆದುರು ಕಾರು ಬರುವುದು,ಬಂದು ನಿಲ್ಲುವುದು ತೀರಾ ವಿರಳವೇ. ಹಂಗೊಮ್ಮೆ ಬಂದರೂ ಯಾವುದೋ ನೆಂಟರಾಗಿರೋದು ಪಕ್ಕಾ. ಗಾಡಿ ಶಬ್ದ ಕೇಳಿ ಹೊರಬಂದ ಜಲಜಮ್ಮನ ಕಣ್ಣಿಗೆ ಅಪರಿಚಿತಾರಾರನ್ನೋ ಕಂಡು ನಿರಾಸೆಯಾದಂತಾಗಿ ನರ್ಸಜ್ಜನನ್ನು ಕರೆದಳು.
           ಯಾಣಕ್ಕೆ ಹೋಗುವ ದಾರಿ ಕೇಳಿದಾಗ ಕಾರಿನಲ್ಲಿ ಬಂದ ನಾಗರೀಕ ವ್ಯಕ್ತಿತ್ವಗಳಿಗೆ ನರ್ಸಜ್ಜ ಬಯ್ಯಲು ತಯಾರಾಗಿದ್ದ, ಅಲ್ಲಿ ರುಕ್ಯಾ ಇಲ್ಲದಿದ್ದರೆ ಬೈದೇ ಬಿಡುತ್ತಿದ್ದನೇನೋ. ನರ್ಸಜ್ಜನಿಗೆ ಅದೆಂತದೋ ಕೋಪ,ಯಾಣದ ಮೇಲೆ. ಹದಿನೆಂಟೋ ಹತ್ತೊಂಬತ್ತೋ ವರ್ಷಗಳ ಹಿಂದಿನ ಶಿವರಾತ್ರಿಯ ಇಂಥದೇ ಅತ್ತ ಬೆಳಿಗ್ಗೆಯೂ ಅಲ್ಲದ,ಇತ್ತ ಮದ್ಯಾಹ್ನವೂ ಅಲ್ಲದ ಹೊತ್ತಲ್ಲಿ ಹೈಸ್ಕೂಲಿಗೆ ಹೋಗುವ ಮಾಣಿ ಯಾಣಕ್ಕೆ ಹೋಗುತ್ತೇನೆಂದು ಹಠ ಹಿಡಿದದ್ದು, ಯಾರದೋ ಸೈಕಲ್ ಏರಿ ಹೋದದ್ದು. ಆಗೆಲ್ಲಾ ಯಾಣ ಇಷ್ಟೊಂದು ಪ್ರಯಾಣಯೋಗ್ಯವಲ್ಲವಾಗಿತ್ತು. ಅದಕ್ಕಾಗೇ "ಸೊಕ್ಕಿದ್ರೆ ಯಾಣ, ರೊಕ್ಕಿದ್ರೆ ಗೋಕರ್ಣ" ಅನ್ನೋ  ಮಾತು ರೂಢಿಯಾದದ್ದು. ಈಗ ಬಿಡಿ, ಶಿಖರದ ಬುಡಕ್ಕೂ ಗಾಡಿ ಹೋಗತ್ತೆ. ಹಂಗೆ ಹೋದವನನ್ನು ಹುಡುಕಿ ಹೊರಟದ್ದು ಮಾರನೇ ದಿನ ನಸುಕಿನಲ್ಲೇ. ಆದರೂ ಸಿಕ್ಕಿದ್ದು ಮಾತ್ರ ಮಾಣಿಯನ್ನು ಒಯ್ದಿದ್ದ ಸೈಕಲ್ ಒಂದೇ. ಮಾಣಿಯನ್ನು ಕಂಡಿದ್ದೇವೆಂದ ಒಬ್ಬೊಬ್ಬರದು ಒಂದೊಂದು ಕಥೆಯಾಗಿತ್ತು. ಒಬ್ಬ ಆ ಸೈಕಲ್ ಮೇಲೆ ಬಂದವ ಯಾವುದೋ ಬಳ್ಳಿಯನ್ನು ದಾಟಿ ರಾಗಿಹೊಸಳ್ಳಿಯ ದಿಕ್ಕಿಗೆ ಹೋಗಿರಬಹುದು ಎಂದರೆ ಮತ್ತೊಬ್ಬ, ಆ ಮಾಣಿ ಯಾರೋ ಹಿಪ್ಪಿ ಹೆಂಗಸಿನ ಜೊತೆ ಹೋದ ಎಂದಿದ್ದನಂತೆ. ಜೋಯಿಸರ ಬಳಿ ಆಂಜನ ಹಾಕಿಸಿದಕೊನೆಗೆ ಆತ ಹಿಪ್ಪಿ ಹೆಂಗಸಿನೊಂದಿಗೇ ಹೋದ ಎಂದು ನಂಬಿ ಮಾಣಿಯ ಜೀವವನ್ನು ನೆನಪಿನಲ್ಲೇ ಬದುಕಿಸಿಬಿಟ್ಟಿದ್ದ ನರ್ಸಜ್ಜ.
          ಆವತ್ತಿಗೇನೂ ಮಗನ ಕಣ್ಮರೆ ನರ್ಸಜ್ಜನನ್ನು ಅಷ್ಟಾಗಿ ಕಾಡದಿದ್ದರೂ ಇತ್ತೀಚೆಗೇಕೋ ಅವನಿಷ್ಟದ ಅಂಗಡಿಯನ್ನೂ ಬೇಜಾರು ಹುಟ್ಟಿಸುವಷ್ಟು ಉತ್ತರಾಧಿಕಾರಿಯೊಬ್ಬನ ಕೊರತೆ ಕಾಡುತ್ತಿತ್ತು. ವಯಸ್ಸಾದಂತೆ ವೈರಾಗ್ಯ ಮತ್ತು ಏಕಾಂತ ಪ್ರಿಯವಾಗುತ್ತದೆ ಎಂವ ಸಿದ್ದಾಂತದ ವ್ಯತಿರಿಕ್ತವಾಗಿ ನರ್ಸಜ್ಜನ ಮನಸ್ಸು ಯೋಚಿಸುತ್ತಿತ್ತು. ಅಷ್ಟಕ್ಕೂ ಯೋಚಿಸುವುದು ಮನಸ್ಸಿನ ಕೆಲಸವಾ? ಗೊತ್ತಿಲ್ಲ.
       ಸಂಜೆ ಎಮ್ಮೆ ಅದೇಕೋ ಹಾಲು ಕೊಡಲು ಕಾಲೆತ್ತಿತ್ತು. ಕೆಲಸವಿಲ್ಲದೆ ಅಂಗಡಿಯ ಹೇಡಿಗೆಯ ಮೇಲೆ ಕುಳಿತವನಿಗೆ ಕಳೆದುಹೋಗಿದ್ದ ಮಗನದೇ ನೆನಪು. ಬೆಳಿಗ್ಗೆ ಹೋಗಿದ್ದ ಕಾರು ವಾಪಸ್ ಬಂತು. ಈ ಬಡ ಅಂಗಡಿಯವನ ಸಹಾಯಕ್ಕಾಗಿಯೇ ಏನೋ,ಕಾರಿನಿಂದ ಇಳಿದ ಡ್ರೈವರ್ ಎಂದು ಗುರುತಿಸಬಹುದಾದ ವ್ಯಕ್ತಿಯೊಬ್ಬ ಇಳಿದು ಜಾಡಿಯಲ್ಲಿದ್ದ ಮೈಸೂರ್ ಪಾಕನ್ನೂ, ಒಂದಿಷ್ಟು ಸೋನಾ ಪಾಪುಡಿಯನ್ನೂ ಕೊಂಡು ಕಾರು ಹತ್ತಿದ. ಕಾರು ಹತ್ತಿದವನ ಮೊಗದಲ್ಲಿ ಅದೆಂತದೋ ಕೃತಜ್ಞ ಭಾವ,ಅದೆಂತದೋ ಸಮಾಧಾನ. ಇದನ್ನು ಗಮನಿಸದಿದ್ದರೆ, ಕಾರಿನಲ್ಲಿದ್ದ ಇಳಿವಯಸ್ಸಿನ ಪರದೇಶೀ ಹೆಂಗಸು ಕಾರಿನ ಗ್ಲಾಸು ತೆಗೆಯದಿದ್ದರೆ ನರ್ಸಜ್ಜನ ಖತ್ರಿ ಅಂಗಡಿಯೆಂಬ ಐತಿಹಾಸಿಕ ಸ್ಥಳವೊಂದು ಸ್ಮಾರಕವಾಗ್ತಿರ್ಲಿಲ್ವೇನೋ. ಅದಾಗಲೇ ಚಾಲು ಆಗಿ ಎರಡು,ಮೂರು...ಹಿಂಗೇ ಗೇರುಗಳನ್ನು ಬದಲಿಸಿ ವೇಗ ಹಿಡಿದ ಕಾರಿನ ಹಿಂದೆ ಓಡಿಹೋದ ನರ್ಸಜ್ಜನಿಗೆ ಆ ಡ್ರೈವರ್ ತನ್ನ ಮಗನಂತೆ ಕಂಡನಾ? ಆ ಪರದೇಶಿ ಹೆಂಗಸು ತನ್ನ ಮಗನನ್ಬು ಒಯ್ದಿದ್ದ ಹಿಪ್ಪಿ ಹೆಂಗಸಂತೆ ಕಂಡಳಾ? ಉತ್ತರ ಹೇಳೋಕೆ ನರ್ಸಜ್ಜನೇ ಸಿಗಬೇಕು.

-ಶರತ್ ಹೆಗಡೆ.

Comments

ನನ್ನ ಮಾವ್ನಮನೆ ಖತ್ರಿ ����

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ