ಹಂಡ್ಗೆಡುಕ

            ಮಕ್ಕಳಿಗೆಲ್ಲಾ ಕೈತುಂಬ ಕೆಲಸ. ಅದ್ಯಾಕೋ ಊರ ಕಡೆಯ ಸೆಳೆತ ಜಾಸ್ತಿಯಾಗಿತ್ತು,ಇತ್ತೀಚೆಗೆ. ಇತ್ತೀಚೆಗೆ ಅಂದ್ರೆ ಮೊನ್ನೆಯಿಂದ, ಹೊತ್ತು ಖಾಲೀ ಮಲಗಿದ್ದಾಗ ಎಚ್ಚರಿಸಿ ಕಂಡ ಆ ಚಿತ್ರದಿಂದ.
     ಜಾಸ್ತಿ ದಿನ ತಡೆದುಕೊಳ್ಳೋಕೆ ಆಗಲಿಲ್ಲ. ಬಿಟ್ಟು ಬಂದಿದ್ದ ಅದೇ ಹಳೆ ಊರಿಗೆ, ರಂಗನಾಥ ಎ.ಎಸ್. ಎಂಬ ಹೆಸರಿನ ಎಸ್ ಅಕ್ಷರದ ಹುಟ್ಟಿಗೆ ಕಾರಣವಾದ ಊರಿಗೆ, ಸಣ್ಣಳ್ಳಿಗೆ ಬಂದೇಬಿಟ್ಟಿದ್ದ. ಹಳೇಮನೆ, ತೋಟ ನೋಡಿಕೊಳ್ಳುತ್ತಿದ್ದ ಅಣ್ಣನ ಮಗ ರಾಮು ಇವನು ಬಂದ ದಿನವೇ ಮನೆ ಖಾಲಿ ಮಾಡಿಕೊಡುತ್ತಿದ್ದನೇನೋ, ಒಬ್ಬಂಟಿ ಇವನಿಗಾದರೂ ಹೊತ್ತು ಕಳೆಯಬೇಕಲ್ಲ! ಬೇಡ ಅಂದಿದ್ದ. ಇಲ್ಲ, ಇಲ್ಲೇ ಇರು ಅಂದಿದ್ದ.
         ರಾಮನಿಗೆ ಒಬ್ಬಳು ಹೆಂಡತಿ, ಸುಗುಣೆ,ಸುಶೀಲೆ, ಸಾಧ್ವಿ ಅಂತೆಲ್ಲ ಕರೆಯಲಾಗದಿದ್ದರೂ ಗಂಡನ ಚಿಕ್ಕಪ್ಪ ಮರಳಿ ಬಂದನೆಂದು ಗಂಡನ ಬಳಿ ' ಜಮೀನನ್ನು ಇಷ್ಟು ವರ್ಷ ನೋಡಿಕೊಂಡಿರಿ, ಈಗ ಬಿಟ್ಟುಬಿಡುವಿರಾ' ಎಂದೆಲ್ಲಾ ಕೂಗಾಡಿ ತಲೆಕೆಡಿಸುವಷ್ಟು ನಾಗರಿಕ ಹೆಣ್ಣಲ್ಲ. ಹೆಸರು ನನಗೆ ನೆನಪಿಲ್ಲ, ರಂಗನಾಥ ಅದೇನೋ ಹೆಸರು ಅಂದಿದ್ದ ಅಂತಷ್ಟೇ ಗೊತ್ತು. ಈ ಶ್ರೀ ಮತ್ತು ಶ್ರೀಮತಿ ರಾಮರಿಗೆ ಒಬ್ಬ ಮಗ, ಶರತನೋ ಭರತನೋ ಯಾರೋ ಒಬ್ಬ. ತಾಲೂಕು ಕೇಂದ್ರದ ಯಾವುದೋ ಕಾಲೇಜಿನಲ್ಲಿ ಮಾಸ್ತರನಂತೆ, ಊರು ದೂರವಾದ್ದರಿಂದ ಅಲ್ಲೇ ಬಾಡಿಗೆ ರೂಮಿನಲ್ಲಿ ಉಳಿಯುತ್ತಾನಂತೆ.
          ಒಂದೆರಡು ದಿನ ತೋಟವನ್ನೆಲ್ಲಾ ತಿರುಗಿ ಪರಿಚಯಿಸಿಕೊಂಡದ್ದಾಯ್ತು. ರಂಗನಾಥ ಎಷ್ಟೇ ಬೇಡವೆಂದರೂ ರಾಮು ಮತ್ತು ಕುಟುಂಬ ಅವರ ಮೂಲಮನೆಗೆ ಗುಳೆ ಹೊರಟರು, ನಿರಾಶ್ರಿತರಂತೇ. ರಂಗನಾಥ (ಇನ್ಮೇಲಿಂದ ರಂಗಣ್ಣ ಅಂತೀನಿ, ಹೆಸರು ಉದ್ದ ಆದಂಗನ್ನಿಸ್ತಿದೆ) ಒಂದೆರಡು ದಿನ ಆ ಏಕಾಂತ ಖುಷಿಕೊಟ್ಟದ್ದಂತೂ ನಿಜ. ತೀರಾ ಅವಶ್ಕತೆ ಇದ್ದಾಗ ಮಾತ್ರ ರಾಮುವಿನ ಬಳಿ ಸಹಾಯ ಪಡೀತಿದ್ದ ಬಿಟ್ಟರೆ ಉಳಿದ ಹೊತ್ತಲ್ಲಿ ರಂಗಣ್ಣ, ತನ್ನ ಹಳೆ ಕ್ಯಾಮರಾ ಮತ್ತು ತೋಟಕ್ಕೆಂದು ಬಿಟ್ಟ ಸೊಪ್ಪಿನ ಬೆಟ್ಟ ಇವಿಷ್ಟರಲ್ಲೇ ಹಗಲನ್ನು ಕಳೆಯುತ್ತಿದ್ದ. ಸಂಜೆ ಹೊತ್ತಿಗೆ ಟಿವಿ ಇದ್ದೇ ಇರುತ್ತಿತ್ತು, ಅರ್ಥವಾಗುವ ಇಂಗ್ಲೀಷ್ ಮೂವಿಗಳು ಮತ್ತು ಯಾವತ್ತಿಗೂ ಅರ್ಥವಾಗದ ಕನ್ನಡ ಧಾರಾವಾಹಿಗಳನ್ನು ತೋರಿಸುತ್ತಾ. ಪುರುಸೊತ್ತಿದ್ದಾಗ ಮಗನೇ ಯಾವಾಗಲಾದರೂ ಒಂದೆರಡು ನಿಮಿಷದ ಮಟ್ಟಿಗೆ ರಾಮು ಹಾಕಿಸಿಟ್ಟ ಹಳೆಮನೆಯ ಲ್ಯಾಂಡ್ ಲೈನಿಗೆ ಫೋನ್ ಮಾಡುತ್ತಿದ್ದದ್ದುಂಟು.
        ಅಡುಗೆಯನ್ನು ಶ್ರೀಮತಿ ರಾಮು ರಂಗಣ್ಣನಿಗಾಗಿ ತಂದುಕೊಡುತ್ತಿದ್ದರೂ ಆಕೆ ಮಾಡುತ್ತಿದ್ದ ಅಡುಗೆ ರಂಗಣ್ಣನ ಪಥ್ಯಕ್ಕೆ, ಆರೋಗ್ಯಕ್ಕೆ ದುಬಾರಿಯಾಗುತ್ತಿತ್ತು, ಅಷ್ಟು ರುಚಿಯಾಗಿರುತ್ತಿತ್ತು. ಒಲೆ ಹಚ್ಚಿ ಅಡುಗೆ ಮಾಡುತ್ತಿದ್ದ ರಂಗಣ್ಣನ ಅಮ್ಮನ ನೆನಪು ಇವನನ್ನೂ ಒಲೆ ಹಚ್ಚಲು ಪ್ರೇರೇಪಿಸುತ್ತಿತ್ತು. ಅಡುಗೆ ಮಾಡಲಾಗದಿದ್ದರೂ, ರಾಮು ಮೇಲ್ಮೆತ್ತಿನಿಂದ ಇಳಿಸಿಕೊಟ್ಟಿದ್ದ ತಾಮ್ರದ ಹಂಡೆಯ ಬುಡ ಬೆಚ್ಚಗೆ ಮಾಡಿ ಸ್ನಾನಕ್ಕಾಗುವಷ್ಟರ ಮಟ್ಟಿಗೆ ಒಲೆ ಹಚ್ಚಬಲ್ಲವನಾಗಿದ್ದ ರಂಗಣ್ಣ. ಒಮ್ಮೊಮ್ಮೆ ಸ್ನಾನ ಯಾತಕ್ಕಾಗಿ ಮಾಡಬೇಕೆಂಬ ಗೊಂದಲ, ನಿರಾಸಕ್ತಿಗಳಿಂದಾಗಿ ಮಲೆನಾಡ ಚಳಿಗೆ ಆ ಹಂಡೆ ನಲುಗುತ್ತಿತ್ತು. ಅದೇನೇ ಆದರೂ ಹಂಡೆಯ ತುಂಬ ತಣ್ಣದಾದರೂ ಸೈ, ನೀರಿರುತ್ತಿತ್ತು.
        ರಂಗಣ್ಣ ನಾಗರಿಕನಾಗಿದ್ದಾಗ ತನ್ನ ಮೊಬೈಲಿಗೆ ಎಂದೂ ಗೇಮ್ ತುಂಬಿಸಿಕೊಂಡವನಲ್ಲ. ಇತ್ತೀಚೆಗೆ ರಾಮುವಿನ ಮಗ ಊರಿಗೆ ಬಂದಾಗ ಒಂದೆರಡು ಗೇಮುಗಳನ್ನು ದಾನ ಮಾಡಿ ಹೋಗಿದ್ದ. ಹೇಗೆ ಆಡುವುದೆಂದು ತಿಳಿಯಲೇ ವಾರಗಳು ಕಳೆದು ಹೋದವು. ಅಷ್ಟೊತ್ತಿಗೆ ರಂಗಣ್ಣ ಊರಿಗೆ ಬಂದು ಒಂದು ತಿಂಗಳೇ ಆಗಿತ್ತು. ಆವತ್ತೊಂದಿನ ತೋಟದ ಕಡೆ ಹೋಗುತ್ತಿದ್ದ ರಂಗಣ್ಣನನ್ನು ನೋಡಿ ಅದ್ಯಾರೋ ರಂಗಣ್ಣನಿಗೆ ಗುರುತಿಲ್ಲದ ಹಳ್ಳಿಗನೊಬ್ಬ "ಏನ್ ರಂಗಣ್ಣಾ, ಇನ್ನು ಇಲ್ಲೇ ಸೆಟ್ಲಾ?" ಅಂತ ಕೇಳಿದ್ರ ಹಿಂದೆಯೇ ಪಕ್ಕದಲಿದ್ದೋನ ಬಳಿ "ಪಾಪ ಮಗ ವೃದ್ದಾಶ್ರಮಕ್ಕೆ ಕಳ್ಸೋಕೆ ರೆಡಿಯಾಗಿದ್ನಂತೆ, ಅದ್ಕೇ ಇಂವ ವಾಪಸ್ ಬಂದಿರೋದು" ಅಂತದ್ದಿದ್ದು ಇವನಿಗೆ ಕೇಳಿಸಿತ್ತು. ಆದರೂ ಪ್ರಶ್ನೆಗಷ್ಟೇ ಉತ್ತರಿಸುವ ನಾಗರೀಕ ಪ್ರಜ್ನೆಯಿಂದ "ಹ್ಞೂಂ, ಇನ್ಮೇಲೆ ಇಲ್ಲೇ ಇರೋದೂ ಅಂತಂದ್ಕೊಂಡಿದೀನಿ" ಅಂತಂದು ತೋಟಕ್ಕೆ ಹೋಗುವ ಮನಸ್ಸಿಲ್ದೇ ಮನೆಯತ್ತ ಕಾಲು ತಿರುಗಿಸಿದ್ದ ರಂಗಣ್ಣ. ಆಮೇಲಿಂದ ಊರ ಹಾದು ತೋಟಕ್ಕೆ ಹೋಗುವ ದಾರಿ ರಂಗಣ್ಣನಿಗೆ ಮರೆತಂತೇ ಆಗಿತ್ತು.
       ಅದೊಂದು ಬೆಳ್ಬೆಳಿಗ್ಗೆಯೇ ಸ್ನಾನ ಮಾಡುವ ಮೂಡ್ ಬಂದು, ರಾಮು ತಂದು ಸರುಗಿದ್ದ ಕಟ್ಟಿಗೆ ಹೊರೆಯಲ್ಲಿ ನಾಲ್ಕು ಕಟ್ಟಿಗೆ ಸೊಗೆದು ಒಲೆಗೆ ಹಾಕಬೇಕೆಂದಾಗ ಅದು ಕಂಡಿತ್ತು. ರಂಗಣ್ಣನ ಹಿರೀಕರ ಕಾಲದ ತಾಮ್ರದ ಹಂಡೆಯ ಬುಡದಲ್ಲಿ ಬೇರು ಬಂದಂತ್ತಿತ್ತು. ಮೊದಲಿಗೆ ಸೊಟ್ಟನೆಯ ಕಟ್ಟಿಗೆಯಾವ್ದೋ ಹಂಡೆಯ ಬುಡದಲ್ಲಿ ಸಿಕ್ಕಿಕೊಂಡು ಹಾಗೆ ಕಾಣುತ್ತಿರಬಹುದೇನೋ ಅಂದುಕೊಂಡರೂ ಒಂದೆರಡು ದಿನಗಳಲ್ಲೇ ಬೇರು ಬೆಳೆದು ಸರಿಯಾಗಿ ಕಾಣುತ್ತಿತ್ತು. ಹಂಡೆಯ ಬುಡ ಹುಟ್ಟಿಸಿಕೊಂಡ ಬೇರು ರಂಗಣ್ಣನ ಕುತೂಹಲವನ್ನು ಕೆದಕಿದರೂ ಆ ಕುತೂಹಲ ದಿನಕಳೆದಂತೆ ಭಯವಾಗಿ ಬದಲಾಯಿತು.
       ಇತ್ತೀಚೆಗೇಕೋ ರಂಗಣ್ಣನಿಗೆ ಪೇಟೆಯ ನೆನಪು ಜಾಸ್ತಿಯಾಗಿತ್ತು. ಮಗನ ನೆನಪು, ಸೊಸೆಯ ನೆನಪು, ಮೊಮ್ಮಗನ ನೆನಪು...ಆ ಊರ ಅಪರಿಚಿತ ಅಂದಂತೆ ತನ್ನ ಮಗ ತನ್ನನ್ನು ವೃದ್ದಾಶ್ರಮಕ್ಕೆ ಕಳುಹಿಸಿದಂತೆ ಬೆಳಗಿನ ಜಾವ ಬಿದ್ದ ಕನಸಿನ ನೆನಪು. ರಂಗಣ್ಣ ಮತ್ತೆ ನಗರಕ್ಕೆ ಹೊರಟೇಬಿಟ್ಟ.
      ಎರಡೇ ದಿನ, ಸಣ್ಣಳ್ಳಿಯ ಮನೆ ಮುಂದೆ ರಂಗಣ್ಣ ಇಳಿದ, ಒಂದು ಮನೆಗೆ ಬೇಕಾದಷ್ಟು ಸಾಮಾನುಗಳ ಜೊತೆ, ಒಂದು ಟಾಟಾ ಏಸ್ನಿಂದ. ಆ ಹಂಡೆಯ ಬುಡದಿಂದ ಹೊರಟಿದ್ದ ಬೇರು ಇನ್ನೂ ದಪ್ಪಗಾಗಿ ಗಟ್ಟಿಯಾಗಿತ್ತು. ಹಳೆ ಹಂಡೆ ಬೇರುಬಿಟ್ಟಿತ್ತು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ