ಮಾರಾಟಕ್ಕಿವೆ...ಎಂದೂ ಬಳಸದ ಚಪ್ಪಲಿಗಳು.

                 ಈ ಬ್ಲಾಗಿಗರ ಖೋಖೊ ಆಟ ನೋಡಿ ಗೊತ್ತು, ಆದ್ರೆ ನಂಗಿದು ಹೊಸದು.
                 ಗುರುಕಿರಣ್ ಸೋದೆ ಬರೆದ ಕಥೆಯಲ್ಲಿ ನಂಗಿಷ್ಟವಾದದ್ದು ಕಥೆಯ ತಲೆ,'ಮಾರಾಟಕ್ಕಿವೆ,ಎಂದೂ ಬಳಸದ ಚಪ್ಪಲಿಗಳು' ಎಂಬ ಆ ಭಾವನೆ. ಇದೊಂದೇ ಸಾಲು ಸಾಕಲ್ಲವೇ? ಕಥೆಯೇ ಬೇಡವಾಗಿತ್ತು ಅನ್ನಿಸಿದರೂ ಗೆಳೆಯ ಗುರುವಿನ ಕಥೆ ಹೇಳುವ ಶೈಲಿ ಮತ್ತೆ ಆಯ್ದುಕೊಂಡ ಕಥೆಯ ಮಾಂಸಲ ಭಾಗ ಇಷ್ಟವಾಯ್ತು. ಗುರು ಬರೆದ ಕಥೆ ಓದಲು ಕೆಳಗಿನ ಲಿಂಕ್ ಬಳಸಿ 
http://guruu725.blogspot.in/2015/11/blog-post_7.html
                  ಗುರು ಅವನ ಆಟ ಮುಗಿಸಿ ನನ್ನ ತಂಗಿಯಂತಾ ಹುಡುಗಿ ರಾಧಾ ಹೆಗಡೆಗೆ ಖೋ ಕೊಟ್ಟ.ರಾಧೆಯ ಕಥೆ ನಂಗೆ ಬಹಳವೇ ಇಷ್ಟವಾಯ್ತು. ಆಧುನಿಕ ಅರ್ಜೆಂಟ್ ಪ್ರೇಮ, ಅರ್ಜೆಂಟ್ ಮದುವೆ, ಅಪಕ್ವ ಬೌದ್ದಿಕತೆಯ ಫಲ ಅಪೂರ್ಣ ಮಗುವಿನ ಸುತ್ತ ಆಕೆ ಹಣೆದ ಕಥೆಯ ಪಾತ್ರಗಳು ನಮ್ಮ ಮಧ್ಯೆಯೇ ಇದ್ದವೇನೋ, ಇದ್ದಾವೇನೋ ಅನ್ನಿಸಿತು. ರಾಧೆಯ ಕಥೆ ಓದಲು ಕೆಳಗಿನ ಲಿಂಕ್ ತೆರೆಯಿರಿ 
http://radhayagneshwar.blogspot.in/2015/11/blog-post_13.html?spref=fb
                 ಸರಿ, ರಾಧಾ ನನಗೆ ಖೋ ಕೊಟ್ಟಿದಾಳೆ. ಬರೆಯೋದೆಲ್ಲಾ ನನ್ ಕೈಲಿ ಆಗೋದಿಲ್ಲಾ ಅಂತ ಡಿಸೈಡಿಸಿದ್ದೆ.ಚಿಕ್ಕ ಕಥೆಗೇನು ಹೊತ್ತ ಪರಿವೆ ಅಂತ ಕಥೆಯ ತಿರುಳಿನ ನನ್ನ ವರ್ಷನ್ ಬರೆದು ನಿಮ್ಮ ಮುಂದಿಡುತ್ತಿದ್ದೇನೆ. ನಾ ಓದಿದಾಗ ಎಲ್ಲೋ ಮೊದಲಿಬ್ಬರ ಕಥೆಯ ನೆರಳಿನಿಂದ ಹೊರಬರಲಾಗಲಿಲ್ಲವೇನೋ ಅನ್ನಿಸಿತು. ಕಾಟಾಚಾರಕ್ಕೆ ಎಂಬಂತೆ ಬರೆದಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ.  😊 😊 😊 😊 😊 
       ನಾನೂ ಖೋ ಕೊಡಬೇಕಲ್ವಾ...ಖೋ ಸ್ಯಾಂಡೀ... Sandy hegde 👍🏻 😇😇👏👏
***********×**************×*****************×****** * **********×      

             ಯಾರೋ ಕರೆದರು...ಚಿಕ್ಕ ಕೈಯೊಂದು ಹೊಟ್ಟೆಯನ್ನು ಬಿರಿದು ಹೊರಬಂದಂತಾಯ್ತು...ಇಲ್ಲ, ದೊಡ್ಡ ಕಾಲೊಂದು...ಎಚ್ಚರವಾದಾಗ ಮೂರೇಗಂಟೆ.

            ಕುವೈತಿನಿಂದ ಗಂಡ ತಂದಿಟ್ಟ ಪುಟ್ಟ ಚಪ್ಪಲಿಯೊಂದು ಮೂಲೆಯಲ್ಲಿ, ಮಂಚದ ಮೂಲೆಯಲ್ಲಿ ನಕ್ಕಿತ್ತು. ಅಣಕಿಸಿತ್ತು.

ಚಪ್ಪಲಿಯ ಅಂಗುಷ್ಟದ ತುದಿ ಮಂಚದ ಮೇಲೇ ನಿಗುರಿ ನಡೆದಿತ್ತು, ಅಂಬೆಯೆರೆದಂತೆ ಕೂಸು. ಇವಳ ಕಂಗಳಲಿ ದುಗುಡ, ಕೂಗಿದರೆ ಗಂಡ ಬಂದಾನೇ? ಕುವೈತಿನಿಂದ? ಸಾರಾಳಿಗೆ ಭ್ರಮೆಯಿರಬಹುದು...
 
          ಚಪ್ಪಲಿ, ಸಾರಾಳ ಬಳಿಯೇ ಬಂತು, ಅಂಗುಷ್ಠದ ತುದಿಯೂರಿ, ತೆವಳಿದಂತೆ. "ಅಮ್ಮಾ, ಕಥೆ ಹೇಳಲೇ? ಮೋಸ ಹೋದ ಅಪ್ಪನದು?" ಈ ಬಾರಿ ದನಿಯ ಆಳ ಇವಳದೇ ಎದೆಯಲ್ಲಿತ್ತು.ಇತ್ತಾ?

              ಇವಳದೇ ಒಳಗಿನ ಕಥೆ, ಇಲ್ಲದ ಮಗುವಿನದ್ದು, ಇದ್ದೂ ಇಲ್ಲದ ಗಂಡನದ್ದು, ಅವನ ಕನಸಿನ ಕೂಸಿನ ಕನಸಿನದು. ಮುಂದಿನ ಬಾರಿ ಬರುವಾಗ ನಮ್ಮ ಮಗು ಈ ಕೆಂಪು ಬಿಳಿಯ ಚಪ್ಪಲಿಗಳನ್ನು ತೊಟ್ಟು ಅದರ ಹಿಮ್ಮಡದಡಿಯ ಸೀಟಿಯ ದನಿ ಅಪ್ಪಾ...ಅಂದಂತಿರಬೇಕು ಅಂದಿದ್ದ ಪಯಾಜ್. ಅದುವರೆಗೂ ಹೊಟ್ಟೆ ಹಿಡಿದು ನಡೆದಿದ್ದ ಸಾರಾಳಿಗೆ ಇದ್ದಕಿದ್ದಂತೇ ಪಾಪಪ್ರಜ್ಞೆ ಕಾಡಿದ್ದೇಕೆ? ಪಯಾಜ್ ಮೂರ್ಖನಾದನೆಂಬ ದುಃಖ ಕಾಡಿದ್ದೇಕೆ? ಕುಡಿದ ವಿಷವೇಕೆ ಭ್ರೂಣವನ್ನಷ್ಟೇ ಕಿತ್ತುಕೊಂಡು ಸಾರಾಳಿಗೆ ಖಬರುತಪ್ಪಿಸಿತು? ಗಂಡನಿಗೆ ಸಾರಾ ಮಾಡಿದ್ದು ಮೋಸವಾ? ಸಾರಾಳಿಂದ ದೂರವಿರೋ ಫಯಾಜನ ಹಣದ ಆಸೆ, ಭವಿಷ್ಯದ ಚಿಂತೆಯಿಂದ ಮಗು ದೂರಾಯಿತಾ? ಮಗು ಬೇಕು, ಆದರೆ ಉದ್ಭವವಾದೀತಾ ಮಗು? ಬರೀ ಮಾತುಗಳಷ್ಟೇ, ಮಗು ಮಾತಾಡುತ್ತದೆ.

                ಅದೇ ಚಪ್ಪಲಿಗಳಿಗೆ ರಾತ್ರಿಗಳಲಿ ಜೀವ ಬರುವುದುಂಟು. ಜೀವವಿರದವೇ ತುಂಬಾ ಜೀವಂತವಾಗಿರುತ್ತವೆ, ನೆನಪುಗಳಂತೇ... ಆಗಾಗ ಯೋಚನೆಯೂ ಬರುವುದುಂಟು, ಮಾರಿಬಿಡಲೇ?

             ಆ ಮಂಚದ ಮೇಲೆ,     
 ಮಾರಾಟಕ್ಕಿವೆ...ಎಂದೂ ಬಳಸದ ಚಪ್ಪಲಿಗಳು...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ